

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಸೋಮವಾರ ಸಂಜೆ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿದವು.
ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಒಂಭತ್ತು ಆನೆಗಳನ್ನು ಅರಣ್ಯ ಭವನದ ಆವರಣದಲ್ಲಿ ಇರಿಸಲಾಗಿದೆ. ಇಷ್ಟುದಿನ ಕಾಡಿನಲ್ಲಿ ಅಡ್ಡಾಡುತ್ತಿದ್ದ ಆನೆಗಳು ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ. ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ಗಜಪಡೆ ವೀಕ್ಷಿಸಲು ನೂರಾರು ಜನರು ಸೇರಿದ್ದರು. ಲಾರಿಯಲ್ಲಿ ಬರುತ್ತಿದ್ದ ಗಜಪಡೆಯನ್ನು ಕಂಡ ಚಿಣ್ಣರ ಸಂಭ್ರಮ ಮುಗಿಲು ಮುಟ್ಟಿತ್ತು. ಅರಣ್ಯ ಭವನದ ಗೇಟ್‌ನಲ್ಲಿ ಜನರನ್ನು ತಡೆಯುತ್ತಿದ್ದರೂ ಅನ್ಯಮಾರ್ಗದಿಂದ ಒಳಬಂದು ಆನೆಗಳನ್ನು ದೂರದಿಂದಲೇ ವೀಕ್ಷಿಸಿದರು.
‘9 ಆನೆಗಳು ಆರೋಗ್ಯವಾಗಿದ್ದು, ವೈದ್ಯರು ನಿಗಾ ಇರಿಸಿದ್ದಾರೆ. ಸದ್ಯಕ್ಕೆ ಆನೆಗಳಿಗೆ ಭತ್ತದ ಹುಲ್ಲು, ಸೊಪ್ಪು ನೀಡಲಾಗುತ್ತಿದೆ. ಅರಮನೆ ಪ್ರವೇಶವಾದ ಬಳಿಕ ವಿಶೇಷ ಆಹಾರ ನೀಡಲಾಗುತ್ತದೆ’ ಎಂದು ಡಿಸಿಎ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದ್ದಾರೆ.
ಅರಮನೆ ಪ್ರವೇಶ ದಿನಾಂಕ ಮುಂದೂಡಿಕೆ: ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ 9 ಆನೆಗಳು ಆ.7ರಂದು (ಗುರುವಾರ) ಬೆಳಗ್ಗೆ ನಡಿಗೆ ಮೂಲಕ ಅರಮನೆ ಪ್ರವೇಶಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರಮನೆಗೆ ಅದ್ದೂರಿಯಾಗಿ ಗಜಪಡೆಯನ್ನು ಸ್ವಾಗತಿಸುವ ಉದ್ದೇಶದಿಂದ ಅರಮನೆ ಪ್ರವೇಶ ಮುಂದೂಡಲಾಗಿದ್ದು, ಆ.10ರಂದು ಗಜಪಡೆ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6.40ರಿಂದ 7.20ರ ನಡುವೆ ಗೋಧೂಳಿ ಸಮಯದಲ್ಲಿ ಗಜಪಡೆ ಅರಮನೆ ಪ್ರವೇಶಿಸಲಿವೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.