

ಎಚ್.ಡಿ.ಕೋಟೆ, ಸರಗೂರು ತಾಲೂಕಿನ ವ್ಯಾಪ್ತಿಯ 120 ಹಾಡಿಗಳು, ಅರಣ್ಯದ ಒಳಗೆ-ಹೊರಗೆ ಜಮೀನು ಉಳುಮೆ ಮಾಡುತ್ತಿರುವ ಸಾಗುವಳಿದಾರರ ಸಮಸ್ಯೆಗಳ ಇತ್ಯರ್ಥಕ್ಕೆ ಶೀಘ್ರ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಜತೆಗೆ ಕಾಲ ಮಿತಿಯೊಳಗೆ ಜಂಟಿ ಸರ್ವೆ ಕಾರ್ಯ ನಡೆಸಿ ಹಕ್ಕುಪತ್ರ, ಸಾಗುವಳಿ ಚೀಟಿ, ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್, ಕಾರ್ಯ ನಿರ್ವಾಹಕ ಅಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಯಿತು. ಎಚ್.ಡಿ.ಕೋಟೆ, ಸರಗೂರು ತಾಲೂಕಿನ ಹಾಡಿಗಳ, ಸಾಗುವಳಿ ಮಾಡಿಕೊಂಡು ಬಂದಿರುವ ಜನರ ಸಮಸ್ಯೆಗಳನ್ನು ಆಲಿಸಲಾಯಿತು.
ಜತೆಗೆ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕಾರವಾಗಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಮತ್ತೊಮ್ಮೆ ಉಪವಿಭಾಗಾಧಿಕಾರಿಗಳ ಸಮಿತಿ ಎದುರು ಮಂಡಿಸುವುದು. ವೈಯಕ್ತಿಕ ಅರ್ಜಿಗಳನ್ನು ಇತ್ಯರ್ಥಪಡಿಸಲು ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಪರಿಹಾರ ಕಂಡು ಹಿಡಿಯಬೇಕು. ಶೀಘ್ರದಲ್ಲೇ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಇತ್ಯರ್ಥವಾಗಿರುವ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯವರು ತಮ್ಮದೆಂದು ಹೇಳುವ ಜಾಗಗಳಲ್ಲಿ ಮತ್ತೊಮ್ಮೆ ಜಂಟಿ ಸರ್ವೆ ನಡೆಸಿ ಸ್ಕೆಚ್ ಮಾಡಿ ಸಲ್ಲಿಸುವುದು. ಎಚ್.ಡಿ.ಕೋಟೆ, ಸರಗೂರು ತಾಲೂಕಿನ ವ್ಯಾಪ್ತಿಯ ಹಾಡಿಗಳ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ತೀರ್ಮಾನ ಮಾಡಲಾಗಿದೆ. ಅರಣ್ಯ ಇಲಾಖೆ ಭೂಮಿಯನ್ನು ಕೆಲವು ಕಡೆ ಕಂದಾಯ ಭೂಮಿಯಾಗಿ ಪರಿವರ್ತಿಸಿ ಅನುಕೂಲ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮನೆ ಮಂಜೂರಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸೃಷ್ಟಿಸಲು ಇಒಗಳಿಗೆ ಸೂಚಿಸಲಾಯಿತು.
ನಮಗೆ ಹಕ್ಕುಪತ್ರ ನೀಡಲ ್ಲ!:
ಹರಿಹರಪುರದ ರಂಗನಾಥ್ ಮಾತನಾಡಿ, 30-40ವರ್ಷಗಳಿಂದ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದರೂ ನಮಗೆ ಹಕ್ಕುಪತ್ರ ನೀಡಿಲ್ಲ. 22 ಜನರಿಗೆ ನೀಡಿದ್ದರೆ, 38 ಜನರಿಗೆ ನೀಡಿಲ್ಲ. ಜಂಟಿ ಸರ್ವೆ ಮಾಡಿ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಡಿ.ಬಿ.ಕುಪ್ಪೆ ಹಾಡಿಯ ವೆಂಕಟೇಶ್, ಅರಣ್ಯ ಹಕ್ಕು ಕಾಯ್ದೆಯಡಿ ಮನೆ ಮಾಲೀಕ ಮೃತ ಪಟ್ಟಿದ್ದರೆ ಮಕ್ಕಳು ಉಳುಮೆ ಮಾಡುತ್ತಿದ್ದರೆ ಅವರಿಗೆ ಹಕ್ಕುಪತ್ರ ನೀಡಬೇಕೆಂದು ಹೇಳಲಾಗಿದೆ. ಆದರೆ ಕೆಲವರ ಅರ್ಜಿಯನ್ನು ತಿರಿಸ್ಕರಿಸಲಾಗಿದೆ. ಕುಟುಂಬದ ಪಟ್ಟಿಯಲ್ಲಿ ಅವಲಂಬಿತರ ಸೇರ್ಪಡೆ ಮಾಡಿಲ್ಲ. 2005ರ ಅರಣ್ಯ ಹಕ್ಕು ಕಾಯ್ದೆ ಬಂದಾಗ 18 ವರ್ಷದೊಳಗಿನವರನ್ನು ಅವಲಂಬಿತರ ಪಟ್ಟಿಯಲ್ಲಿ ಸೇರಿಸದೆ ಇರುವ ಕಾರಣ ಈಗ ಅರ್ಜಿ ತಿರಸ್ಕರಿಸಲಾಗಿದೆ ಎಂದು ಅಳಲು ತೋಡಿಕೊಂಡರು.
ಈ ವೇಳೆ ತಹಸೀಲ್ದಾರ್ ಮೋಹನಕುಮಾರಿ, 376 ಕುಟುಂಬಗಳಿಗೆ ಕ್ಲಿಯರ್ ಮಾಡಿದ್ದು, 12 ಜನರಿಗೆ ಹಕ್ಕುಪತ್ರ ನೀಡಬೇಕು. 90 ಅರ್ಜಿಗಳಲ್ಲಿ 45 ಅರ್ಜಿಗಳನ್ನು ತಿರಸ್ಕರಿಸಿ, 45 ಅರ್ಜಿಗಳನ್ನು ಮರುಪರಿಶೀಲಿಸುವಂತೆ ಉಪ ವಿಭಾಗಾಧಿಕಾರಿಗಳ ಸಮಿತಿ ಸೂಚನೆ ನೀಡಿದೆ ಎಂದು ವಿವರಿಸಿದರು.
ಇದನ್ನು ಪರಿಗಣಿಸಿದ ಡಿಸಿ, ತಂದೆ ಇಲ್ಲದಿದ್ದಾಗ ಮಕ್ಕಳು ಅರ್ಜಿ ಹಾಕುವುದಕ್ಕೆ ಅವಕಾಶ ಕೊಡಬೇಕು. 18 ವರ್ಷದೊಳಗೆ ಇದ್ದವರು ಈಗ ಅವಲಂಬಿತರ ಪಟ್ಟಿಯಲ್ಲಿ ಇಲ್ಲದಿದ್ದರೆ ಮೊದಲು ಸೇರಿಸಬೇಕು. ಈಗಾಗಲೇ ಜಮೀನು ಉಳುಮೆ ಮಾಡಿಕೊಂಡು ಬಂದಿರುವ ಕಾರಣ ಮರುಪರಿಶೀಲನೆ ನಡೆಸಬೇಕು. ಎಸ್ಸಿ ಸಮಿತಿಯಿಂದ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಸಮಿತಿಗೆ ಬಂದರೆ ಅದನ್ನು ಪರಿಶೀಲಿಸಿ ಒಪ್ಪಿಗೆ ಕೊಡಲು ಗಮನಹರಿಸಲಾಗುವುದು ಎಂದು ಹೇಳಿದರು.
ಡಿ.ಬಿ.ಕುಪ್ಪೆಯ 530 ಎಕರೆಯಲ್ಲಿ 370 ಎಕರೆ ಅರಣ್ಯ ಪ್ರದೇಶವಾಗಿದ್ದರೆ, ಉಳಿದ 160 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು. ಮರುಪರಿಶೀಲನೆಯಲ್ಲಿರುವ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. 160 ಎಕರೆ ಜಮೀನಿನ ಬಗ್ಗೆ ನವೆಂಬರ್ ತಿಂಗಳೊಳಗೆ ಸರ್ವೆ ಕಾರ್ಯ ಮುಗಿಸಬೇಕು. ಡಿಸೆಂಬರ್ ಒಳಗೆ ಅರಣ್ಯ ಹಕ್ಕು ಕಾಯ್ದೆ ಸಮಿತಿಯಲ್ಲಿ ಅನುಮೋದನೆ ನೀಡಿ ಜಿಲ್ಲಾ ಸಮಿತಿ ಸಭೆಯಲ್ಲಿ ಮಂಡಿಸುವಂತೆ ಹೇಳಿದರು.