

ಚಿತ್ರದುರ್ಗ: ಹಿಂದುಗಳ ನಂಬಿಕೆಯ ಮುಕ್ಕೋಟಿ ದೇವರುಗಳಲ್ಲಿ ಮೊದಲ ಪೂಜಿತ ವಿಘ್ನನಿವಾರಕ ವಿನಾಯಕನ ಮೂರ್ತಿ ಅಯೋಧ್ಯೆಯಲ್ಲಿ ಸುಂದರವಾಗಿ ಮೂಡಿಬರುತ್ತಿದೆ. ಬಯಸದೆ, ಒಲಿದ ಭಾಗ್ಯವಾಗಿ ಇದರ ಕೆತ್ತನೆಯ ಅವಕಾಶ ಕೋಟೆನಾಡಿನ ಯುವಶಿಲ್ಪಿ ಕೀರ್ತಿ ನಂಜುಂಡಸ್ವಾಮಿ ಅವರಿಗೆ ಲಭಿಸಿದೆ.
ಇತಿಹಾಸ ಸೃಷ್ಟಿಗೆ ಮುಂದಾಗಿರುವ ಅಯೋಧ್ಯೆಯ ಭವ್ಯ ಶ್ರೀರಾಮಮಂದಿರ ಸ್ಥಳಕ್ಕೆ ಡಿ. 7ರಂದು ಶಿಲ್ಪಿ ತೆರಳಿದ್ದು, ಎರಡು ಮುಕ್ಕಾಲು ಅಡಿ ಎತ್ತರದ ಗಣಪತಿ ವಿಗ್ರಹ ಕೆತ್ತನೆಗೆ ಒಂದೂವರೆ ತಿಂಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ದೇವತಾ ಕಾರ್ಯದಲ್ಲಿ ತಲ್ಲೀನರಾಗಿ ಕೆತ್ತನೆಯಲ್ಲಿ ನಿರತರಾಗಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ಮುಗಿದ ಬಳಿಕ ಮತ್ತೆ 2 ವರ್ಷ ಇನ್ನಿತರೆ ಕೆತ್ತನೆ ಕಾರ್ಯದ ಜವಾಬ್ದಾರಿಯನ್ನೂ ಅಯೋಧ್ಯೆಯಲ್ಲಿಯೇ ಶಿಲ್ಪಿ ಕೀರ್ತಿ ಮುಂದುವರಿಸಲಿದ್ದಾರೆ.
ಹಿಂದು ದೇವರುಗಳ ಯಾವುದೇ ದೇಗುಲ ನಿರ್ಮಿಸಿದರೂ ಗಣಪನ ಮೂರ್ತಿ ಪ್ರತಿಷ್ಠಾಪನೆ ಆಗಲೇಬೇಕು. ಅಗ್ರಸ್ಥಾನ ಪಡೆದ ವಿನಾಯಕನ ಮೂರ್ತಿ, ಅದರಲ್ಲೂ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಶ್ರೀರಾಮನ ಮಂದಿರದೊಳಗೆ ಕೆತ್ತನೆಯಲ್ಲಿ ಪುತ್ರ ಭಾಗಿಯಾಗಿರುವುದು ಕುಟುಂಬಸ್ಥರ ಸಂತಸ ಇಮ್ಮಡಿಗೊಳಿಸಿದೆ.
ನಗರದ ಕೋಟೆ ರಸ್ತೆಯ ನಿವಾಸಿ ಕೆ.ನಂಜುಂಡಸ್ವಾಮಿ, ಶಾರದಾ ದಂಪತಿಯ ಪುತ್ರ ಕೀರ್ತಿ ಶಿಲ್ಪಕಲೆಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿದ್ದಾರೆ. ಕಾರ್ಕಳದ ಕೆನರಾ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಲ್ಪಕಲೆಯಲ್ಲಿ ಶಿಕ್ಷಣ ಪಡೆದಿದ್ದು, 9 ವರ್ಷ ಹಲವು ಶಿಲ್ಪಿಗಳ ಬಳಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ರಾಮಮಂದಿರದಲ್ಲಿ ವಿಗ್ರಹ ಕೆತ್ತನೆಯ ನಿರ್ಮಾಣದ ಹೊಣೆಗಾರಿಕೆ ಅವರನ್ನು ಅರಸಿ ಬಂದಿದ್ದು, ನಿತ್ಯ ಬೆಳಗ್ಗೆ 8ಕ್ಕೆ ಆರಂಭಿಸಿ ರಾತ್ರಿ 8ರವರೆಗೂ ಕೆತ್ತನೆಯಲ್ಲಿ ಮಗ್ನರಾಗಿದ್ದಾರೆ.
ಕೀರ್ತಿ ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿದ್ದನ್ನು ನಂಜುಂಡಸ್ವಾಮಿ ಅವರು ಚಿಕ್ಕವಯಸ್ಸಿನಲ್ಲಿಯೇ ಗಮನಿಸಿದ್ದರು. ಶಿಲ್ಪಕಲೆ ಅಧ್ಯಯನಕ್ಕೆ ಪ್ರೋತ್ಸಾಹಿಸಿದರು. ಆರಂಭದಲ್ಲಿ ಕಷ್ಟವೆನಿಸಿದರೂ ಎರಡೂವರೆ ವರ್ಷದ ಅಧ್ಯಯನದ ಬಳಿಕ ಪರಿಪಕ್ವತೆ ಬೆಳೆಸಿಕೊಂಡು ಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ.
ಆಂಜನೇಯ, ಬೀರಲಿಂಗೇಶ್ವರ, ಗಣಪತಿ, ಸಿಂಹ, ಚೌಡೇಶ್ವರಿ, ತಿರುಪತಿ ತಿಮ್ಮಪ್ಪ, ಮಡಿವಾಳ ಮಾಚಿದೇವ, ಸೇವಾಲಾಲ್ ಸೇರಿ 35ಕ್ಕೂ ಹೆಚ್ಚು ವಿಗ್ರಹ ಕೆತ್ತಿದ್ದಾರೆ. ದೇಗುಲ ನಿರ್ಮಾಣ ಕಾರ್ಯದಲ್ಲಿ ಕಲಾ ಕೌಶಲವಿದ್ದು, ಕೆಲ ವರ್ಷಗಳಿಂದ ಕೋಟೆ ಮುಂಭಾಗ ಸನಾತನ ಕಲಾ ವೈಭವವೆಂಬ ಮಳಿಗೆ ತೆರೆದು ದೇವರ ವಿಗ್ರಹ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.
ಕಲ್ಲಿನ ವಿಗ್ರಹ ಕೆತ್ತನೆ ಕಾರ್ಯವನ್ನು ಹಗಲು-ರಾತ್ರಿ ಎನ್ನದೆ, ಪುತ್ರ ಏಕಾಂಗಿಯಾಗಿ ಮಾಡುತ್ತಾನೆ. ಎರಡು ತಿಂಗಳೊಳಗೆ ವಿಗ್ರಹ ಸಿದ್ಧವಾಗುತ್ತದೆ. ಇತ್ತೀಚೆಗೆ ಅವಕಾಶ ಹೆಚ್ಚಾಗಿ ಒದಗಿ ಬರುತ್ತಿವೆ ಎನ್ನುತ್ತಾರೆ ಪಾಲಕ ಕೆ.ನಂಜುಂಡಸ್ವಾಮಿ.