

ಚಿಕ್ಕಬಳ್ಳಾಪುರ : ದಿನನಿತ್ಯದ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನ್ನು ಸಮರ್ಪಕವಾಗಿ ಬಳಸಿ ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್ ತಿಳಿಸಿದರು.
ನಗರದ ಶೆಲ್ ಅಪರಲ್ಸ್ ಲಿಮಿಟೆಡ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಯೋಡಿನ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶ. ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕ ಎಂದರು.
ಅಯೋಡಿನ್ ಕೊರತೆಯಿಂದ ಮೂಕತನ, ಗರ್ಭಿಣಿಯರಲ್ಲಿ ಗರ್ಭಪಾತ, ಮಕ್ಕಳು ಸತ್ತು ಹುಟ್ಟುವ ಸಾಧ್ಯತೆ, ವಯಸ್ಕರಲ್ಲಿ ಕಾರ್ಯ ನಿರ್ವಹಣೆಯ ವೈಫಲ್ಯ, ಗಳಗಂಡ ರೋಗ ಸೇರಿ ಅನಾರೋಗ್ಯದ ನಾನಾ ಸಮಸ್ಯೆಗಳು ಕಾಡುತ್ತವೆ ಎಂದರು. ಪ್ರತಿದಿನ ಬೇಕಾಗುವ ಅಯೋಡಿನ್ ಅಂಶ ಪ್ರಮಾಣ ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ 150 ರಿಂದ 300 ಮೈಕ್ರೋ ಗ್ರಾಂ ನಷ್ಟು ಬೇಕಾಗುತ್ತದೆ. ಪ್ರತಿಯೊಬ್ಬರು ಅಯೋಡಿನ್‌ಯುಕ್ತ ಉಪ್ಪನ್ನೇ ಉಪಯೋಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶೆಲ್ ಅಪರಲ್ಸ್ ಲಿಮಿಟೆಡ್‌ನ ಅಡ್ಮಿನ್ ನಾರಾಯಣಸ್ವಾಮಿ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಯಾಜುಲ್ಲಾ ಖಾನ್, ಆರೋಗ್ಯ ಸಹಾಯಕಿ ಮಮತ ಮತ್ತಿತರರು ಇದ್ದರು.