

ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಚಾಮುಂಡಿಬೆಟ್ಟ ರಸ್ತೆಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ಜಮಾಯಿಸಿದರು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ಸೇಠ್ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು, ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಬಿಜೆಪಿ ಹಾಗೂ ಅಮಿತ್ ಷಾ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಿದ್ಧಾರ್ಥನಗರ, ಭಗವಾನ್ ಬುದ್ಧ ವೃತ್ತ, ಮಲೆ ಮಹದೇಶ್ವರ ದೇವಸ್ಥಾನದ ರಸ್ತೆ, ಹಳೇ ಹಾಲಿನ ಡೇರಿ ಮಾರ್ಗವಾಗಿ ಜಿಲ್ಲಾಡಳಿತ ಭವನ ಎದುರು ತಲುಪಿದರು. ನಂತರ, ಕೆಲ ಕಾರ್ಯಕರ್ತರು ಅಮಿತ್ ಷಾ ಭಾವಚಿತ್ರಕ್ಕೆ ಬೆಂಕಿ ಹಾಕಿದರು.
ಬಿಜೆಪಿಯವರಿಗೆ ಬಡವರು, ಹಿಂದುಳಿದವರು, ದಲಿತರು ಸೇರಿ ಕೆಳಹಂತದ ಜನರು ಬೇಕಾಗಿಲ್ಲ. ತಮ್ಮ ಅಡಿಯಾಳಾಗಿಯೇ ನೋಡುವ ಹುನ್ನಾರವಿದು ಎಂದು ಮುಖಂಡರು ಆರೋಪಿಸಿದರು.
ಸಾವರ್ಕರ್ ಮತ್ತು ಗೋಳ್ವಾಲ್ಕರ್ ಕೂಡ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇಂತಹದ್ದೇ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದರು. ಈ ನಾಯಕರ ಹಿಂಬಾಲಕರಾದ ಷಾ ಇದೀಗ ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಫ್ಯಾಷನ್ ಎಂದು ಕರೆಯುವ ಮೂಲಕ, ಅಂಬೇಡ್ಕರ್ ಕುರಿತು ಸಂಘದ ಆಂತರ್ಯದಲ್ಲಿರುವ ಅಸಹನೆಯನ್ನು ಹೊರಹಾಕಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡುವ ಮೂಲಕ ಜಾತಿ ಗಣತಿ ಮಾಡಬೇಕೆಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬೇಡಿಕೆಯಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರ ಪರಂಪರೆಯ ರಕ್ಷಣೆಗಾಗಿ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಶಾಸಕರಾದ ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಸುನೀತಾ ವೀರಪ್ಪಗೌಡ, ಮರಿತಿಬ್ಬೇಗೌಡ, ಕಳಲೆ ಕೇಶವಮೂರ್ತಿ, ಕೆಪಿಸಿಸಿ ಉಪಾಧ್ಯಕ್ಷ ಚಂದ್ರಮೌಳಿ, ವಕ್ತಾರರಾದ ಎಂ.ಲಕ್ಷ್ಮಣ್, ಎಚ್.ಎ.ವೆಂಕಟೇಶ್, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಡಿ.ಚಕ್ಕಡಿ, ಭಾಸ್ಕರ್‌ಎಲ್.ಗೌಡ, ಮಾಜಿ ಮೇಯರ್‌ಗಳಾದ ನಾರಾಯಣ, ಅನಂತು, ಆರಿಫ್ ಹುಸೇನ್, ಮೋದಾಮಣಿ, ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ, ಬಿ.ಎಲ್.ಭೈರಪ್ಪ, ಪುಷ್ಪಲತಾ, ನಗರಪಾಲಿಕೆ ಮಾಜಿ ಸದಸ್ಯರಾದ ಸಿದ್ದಪ್ಪ, ಪಲ್ಲವಿ ಬೇಗಂ, ಸಿ.ಎಸ್.ರಜನಿ ಅಣ್ಣಯ್ಯ, ಉದಯಕುಮಾರ್, ಕೆ.ವಿ.ಮಲ್ಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕೂರ್ಗಳ್ಳಿ ಮಹದೇವು, ಮಾಜಿ ಸದಸ್ಯರಾದ ಎಸ್.ಸತ್ಯನಾರಾಯಣ, ಎಚ್.ಆರ್.ಭಾಗ್ಯಲಕ್ಷ್ಮೀ, ಕೆ.ಮಾರುತಿ, ತಲಕಾಡು ಮಂಜುನಾಥನ್, ಬೀರಿಹುಂಡಿ ಬಸವಣ್ಣ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಆರ್.ನಾಗೇಶ್, ಮೈಮುಲ್ ನಿರ್ದೇಶಕ ಬಿ.ಗುರುಸ್ವಾಮಿ ಇತರರು ಪಾಲ್ಗೊಂಡಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ದೇಶದ ಗೃಹಮಂತ್ರಿಗಳೇ ಮಾತನಾಡಿರುವುದನ್ನು ಕೇಳಿ ದೇಶವೇ ದಿಗ್ಭ್ರಮೆಗೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬರುವಾಗ ಸಂವಿಧಾನದಡಿ ಸರ್ಕಾರ ನಡೆಸುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಅವರ ವಿರುದ್ಧವೇ ಮಾತನಾಡುತ್ತಾರೆ. ಅವರಿಗೆ ಸಂವಿಧಾನದ ಅಶಯಗಳಲ್ಲಿ ನಂಬಿಕೆ ಇಲ್ಲ. ಸದನದಲ್ಲಿ ಬಂದ ಮಾತುಗಳು ಕೇವಲ ಅಮಿತ್ ಷಾ ಮಾತಲ್ಲ, ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಿಲುವು. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಮಿತ್ ಷಾ ಅವರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಬೇಕು.
ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಷಾ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಬಿಜೆಪಿ ಸಂವಿಧಾನ ಹಾಗೂ ಅಂಬೇಡ್ಕರ್ ವಿರೋಧಿಯಾಗಿದ್ದು, ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹುನ್ನಾರ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕು.
ಕೆ.ವೆಂಕಟೇಶ್ ಸಚಿವ