ಅಭಿಷೇಕದಲ್ಲಿ ಮಿಂದು ನಾನಾ ಬಣ್ಣಗಳಿಂದ ಕಂಗೊಳಿಸಿದ ಶ್ರೀನಂದಿ ವಿಗ್ರಹ

4
Published on

ದೇಶದ 3ನೇ ಅತಿ ದೊಡ್ಡ ಏಕಶಿಲಾಮೂರ್ತಿ ಚಾಮುಂಡಿಬೆಟ್ಟದ ಶ್ರೀನಂದಿ ವಿಗ್ರಹ ಭಾನುವಾರ ವಿವಿಧ ದ್ರವ್ಯಗಳ ಅಭಿಷೇಕದಲ್ಲಿ ಮಿಂದು ನಾನಾ ಬಣ್ಣಗಳಿಂದ ಕಂಗೊಳಿಸಿತು.

ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಚಾಮುಂಡಿಬೆಟ್ಟದ ಶ್ರೀನಂದಿಗೆ 19ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಗಳಿಂದ ನಡೆಸಲಾಯಿತು.

ಮೂರು ಗಂಟೆಗೂ ಹೆಚ್ಚು ಕಾಲ ಬಗೆಯ ದ್ರವ್ಯಗಳ ಅಭಿಷೇಕ ನಡೆಯಿತು. ಮೊದಲಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ನಂದಿಗೆ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು.

ನಂತರ ಶ್ರಿನಂದಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಬೇಲದಹಣ್ಣು, ಎಳನೀರು, ಅರಿಶಿಣ, ಕುಂಕುಮ, ಸಿಂಧೂರ, ರಕ್ತಚಂದನ ಹಾಗೂ ವಿವಿಧ ಅಭಿಷೇಕವನ್ನು ನಂದಿಗೆ ನೆರವೇರಿಸಲಾಯಿತು.

ಬೆಳಗ್ಗೆಯಿಂದಲೇ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಅಭಿಷೇಕಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಬಕೆಟ್‌ಗಳಲ್ಲಿ ಸಿದ್ಧಮಾಡಿಕೊಂಡಿಕೊಂಡು ಯಾವುದೇ ಅಡಚಣೆಯಲ್ಲದೆ ಅಭಿಷೇಕ ನೆರವೇರಿಸಿದರು. ಇದೇ ವೇಳೆ ಸ್ಥಳದಲ್ಲಿ ಸೇರಿದ್ದ ನೂರಾರು ಮಂದಿ ಭಕ್ತರು ಶ್ರೀನಂದಿಯ ಅಭಿಷೇಕದ ಕ್ಷಣಗಳನ್ನು ಕಣ್ತುಂಬಿಕೊಳ್ಳವ ಮೂಲಕ ಭಕ್ತಿಯ ಪರವಶದಲ್ಲಿ ಮಿಂದೆದ್ದರು.

ಅಭಿಷೇಕದ ವೇಳೆ ಒಂದು ಕಡೆ ಮಂತ್ರಘೋಷ ಕಂಪು ಮುಳುಗಿದರೆ ಮತ್ತೊಂದು ಕಡೆ ಭಕ್ತರಿಂದ ಶ್ರೀನಂದಿಗೆ, ಚಾಮುಂಡೇಶ್ವರಿಗೆ ಹಾಗೂ ಉತ್ತನಳ್ಳಿ ಮಾರಮ್ಮನಿಗೆ ಜೈಕಾರ ಘೋಷಗಳು ಕೇಳಿಸಿದವು.

ಇದೇ ವೇಳೆ ಅಭಿಷೇಕದಲ್ಲಿ ಭಾಗವಹಿಸಿದ್ದ ನೂರಾರು ಭಕ್ತಿರಿಗೆಲ್ಲ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಹಾರಾಜರ ಕಾಲದಿಂದಲೂ ಕಾರ್ತಿಕ ಮಾಸದಲ್ಲಿ ಇಲ್ಲಿನ ನಂದಿಗೆ ಅಭಿಷೇಕ ನಡೆಯುತ್ತಾ ಬಂದಿದೆ. ಇದೊಂದು ದೈವಿಕ ಕಾರ್ಯವಾಗಿದ್ದು, ಭಕ್ತಿಯ ಜಾಗೃತಿಗೆ, ಪ್ರಸರಣೆಗೆ ಅಗತ್ಯ. ಬೆಟ್ಟದ ಬಳಗದ ಸದಸ್ಯರು ಮತ್ತು ಭಕ್ತಾದಿಗಳು ಅಭಿಷೇಕವನ್ನು ಉತ್ತಮವಾಗಿ ನೆರವೇರಿಸಿದ್ದು, ಇದರಿಂದ ದೇಶ, ಜನತೆಗೆ ಶಾಂತಿ, ನೆಮ್ಮದಿ ದೊರಕಲಿ ಎಂದು ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ಗೋವಿಂದ, ಪದಾಧಿಕಾರಿಗಳಾದ ಪ್ರಕಾಶ್, ಸುಂದರ್, ಶಂಕರ್ ಹಾಗೂ ಮಹದೇವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net