ಅಭಿವೃದ್ಧಿ ಮೂಲಕ ಭಕ್ತಿ ತೋರಿಸಲಿ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

03
Published on

ಬೆಳಗಾವಿ: ದೇವರ ಮೇಲಿನ ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತವಾಗಬಾರದು. ಕೆಲಸದ ಮೂಲಕ ನಿಜವಾದ ಭಕ್ತಿ ತೋರಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ತಾಲೂಕಿನ ಗಣೇಶಪುರದ ಗಂಗಾ ನಗರದಲ್ಲಿ ಭಾನುವಾರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ನನ್ನ ಭಕ್ತಿ, ನಮ್ಮ ಸಂಸ್ಕೃತಿಯ ಕುರಿತ ಶ್ರದ್ಧೆ ಭಾಷಣಕ್ಕೆ ಸೀಮಿತವಲ್ಲ. ಅದರಲ್ಲಿ ರಾಜಕಾರಣವನ್ನೂ ಮಾಡುವುದಿಲ್ಲ. ಅಭಿವೃದ್ಧಿ ಕೆಲಸ, ಮಂದಿರಗಳ ನಿರ್ಮಾಣದ ಮೂಲಕ ನನ್ನ ಭಕ್ತಿಯನ್ನು ನಾನು ತೋರಿಸುತ್ತಿದ್ದೇನೆ ಎಂದರು.

ಸರ್ಕಾರದಲ್ಲಿ ಬಹಳಷ್ಟು ಯೋಜನೆಗಳಿರುತ್ತವೆ. ಆದರೆ, ಅವುಗಳನ್ನು ತರಬೇಕಾದವರು ಶಾಸಕರು. ಆದರೆ ಹಿಂದೆಲ್ಲ ಏಕೆ ಅಭಿವೃದ್ಧಿ ಆಗಲಿಲ್ಲ? ವಿಚಾರ ಮಾಡಿ. ನಾನು ಚುನಾವಣೆ ಮುಗಿದ ತಕ್ಷಣ ಬೆಂಗಳೂರಿಗೆ ತೆರಳಿ ನಮ್ಮ ಕ್ಷೇತ್ರಕ್ಕೆ ಏನೇನೂ ಯೋಜನೆ ತರಬಹುದು ಎನ್ನುವುದನ್ನು ಯೋಚಿಸುತ್ತೇನೆ. ಕಾರ್ಯಪ್ರವೃತ್ತನಾಗುತ್ತೇನೆ. ಕೇವಲ ಧರ್ಮ, ಭಾಷೆ ಹೇಳುತ್ತ ಕುಳಿತರೆ ಆಗುವುದಿಲ್ಲ.

ಕೆಲಸ ಮಾಡುತ್ತ ನಮ್ಮ ಭಕ್ತಿ ತೋರಿಸೋಣ ಎಂದು ಹೇಳಿದರು. ಗಣೇಶಪುರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಗೊಳ್ಳಲಿದ್ದು, ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಯುವರಾಜ ಕದಂ, ವಿಠ್ಠಲ ಪಾಟೀಲ, ಸೂರಜ ಅತ್ತಲಗಿ, ಮಂಜು ಭಗತ್, ಕುನಾಲ ಬಾಹು, ಗೌರೀಶ್ ಬಾಹು, ಸಚಿನ್ ಸೋಮನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net