

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಆಯೋಜನೆಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಅನುಮತಿ ದೊರೆತು ಪಂದ್ಯಾವಳಿಯೂ ಆರಂಭಗೊಂಡಿದೆ. ಆದರೆ, ಪಂದ್ಯಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಅಭಿಮಾನಿಗಳಿಲ್ಲದೆ ಪಂದ್ಯಗಳು ನಡೆಯುತ್ತಿವೆ.
ಫ್ರಾಂಚೈಸಿಗಳು, ಕೆಎಸ್‌ಸಿಎ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಕೆಲವೇ ಕೆಲವು ಮಂದಿಗೆ ಮಾತ್ರ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅವಕಾಶ ನಿರ್ಬಂಧಿಸಿದರೂ ಅಭಿಮಾನಿಗಳು ಮೊದಲ ದಿನದ ಪಂದ್ಯಗಳನ್ನು ವೀಕ್ಷಿಸಲು ಹಾತೊರೆದರು. ಕೆಲವರು ಮೈದಾನದ ಬಳಿಯ ಮರ ಏರಿ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮೈದಾನದೊಳಕ್ಕೂ ಬಂದಿದ್ದರು. ಅವರನ್ನೆಲ್ಲ ಪೊಲೀಸರು ವಾಪಸ್ ಕಳುಹಿಸಿದರು. ಮರ ಹತ್ತಿದವರನ್ನು ಕೆಳಗೆ ಇಳಿಸಿದರು.