ಅಪರಾಧಿಕ ಕೃತ್ಯ ಹೆಚ್ಚಳ ಜನ ತಲ್ಲಣ

PH 03
Published on

ಬಾಬುರಾವ ಯಡ್ರಾಮಿ ಕಲಬುರಗಿ
ಕಲಬುರಗಿ ನಗರದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಕಳ್ಳತನ, ಸುಲಿಗೆ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡಿ ಜನರಲ್ಲಿ ಭಯಾತಂಕ ಹುಟ್ಟಿಸುವುದು, ಪುಂಡರ ಅಟ್ಟಹಾಸ, ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಕೊಲೆಯಂಥ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇದು ಸನ್ಸಿಟಿ ಜನರನ್ನು ತಲ್ಲಣಗೊಳಿಸಿದೆ.

ಬಿಸಿಲ ಝಳದಿಂದ ಬಸವಳಿದವರಿಗೆ ಕಳ್ಳರ, ಸುಲಿಗೆಕೋರರ ಮತ್ತು ಪುಂಡರ ಹಾವಳಿ ಮತ್ತೊಂದು ತೆರೆನಾದ ಸಂಕಷ್ಟ ತಂದೊಡ್ಡಿದೆ. ಹೆಚ್ಚುತ್ತಿರುವ ಅಪರಾಧಿಕ ಕೃತ್ಯಗಳನ್ನು ನೋಡಿದರೆ ಸನ್ಸಿಟಿ ಸುರಕ್ಷಿತನಾ? ಎಂಬ ಅನುಮಾನ ಜನರಲ್ಲಿ ಕಾಡುವಂತೆ ಮಾಡಿದೆ. ಇನ್ನು ಮೇಲಿಂದ ಮೇಲೆ ನಾನಾ ತರಹದ ಕ್ರೈಂಗಳು ಸಂಭವಿಸಿದರೂ ಪೊಲೀಸರು ಮೈಕೊಡವಿಕೊಂಡು ಎದ್ದೇಳದಿರುವುದು ಜನರನ್ನು ಸಿಟ್ಟಿಗೆ ತರಿಸುತ್ತಿದೆ.

ದೊಡ್ಡ ದೊಡ್ಡ ರೌಡಿ ಗ್ಯಾಂಗ್ಗಳನ್ನು ಮಟ್ಟ ಹಾಕಿದ ಕಲಬುರಗಿ ಪೊಲೀಸರಿಗೆ ಇದೇನು ದೊಡ್ಡದಾದ ಕೆಲಸವಲ್ಲ. ಆದರೆ, ಹೀಗ್ಯಾಕೆ ಮಾಡುತ್ತಿದ್ದಾರೆ ಎಂದು ಜನರು ಧ್ವನಿ ಎತ್ತುತ್ತಿದ್ದಾರೆ. ಇಷ್ಟು ದಿನ ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕೆಲಸಕ್ಕೆ ಪೊಲೀಸರು ನಿಯೋಜಿಸಿದ ಕಾರಣವಿರಬಹುದು. ಆದರೆ, ಜನರ ಸುರಕ್ಷತೆಗೂ ಒಂದಿಷ್ಟು ಗಮನ ಹರಿಸಬೇಕಲ್ಲವೆ ಎಂಬುದು ನಗರದ ನಾಗರಿಕರ ಪ್ರಶ್ನೆ.

ನಗರದ ಆಳಂದ ರಸ್ತೆಯಲ್ಲಿರುವ ದೇವಿ ನಗರದಲ್ಲಿನ ಮನೆಗಳಲ್ಲಿ ಸರಣಿಗಳ್ಳತನ, ಅದಕ್ಕೂ ಮೊದಲು ಅದೇ ಬಡಾವಣೆಯಲ್ಲಿ ಸತತ ಬೈಕ್ಗಳ ಕಳ್ಳತನ, ಇದಕ್ಕೆ ಹೊರತುಪಡಿಸಿ ನಗರದ ಐದಾರು ಠಾಣೆ ವ್ಯಾಪ್ತಿಯಲ್ಲಿ ಜರುಗಿದ ಬೈಕ್ ಚೋರಿ, ಚುನಾವಣೆ ಫಲಿತಾಂಶ ಬಂದ ದಿನ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಪುಂಡರ ಗುಂಪೊಂದು ಮಚ್ಚು, ಲಾಂಗ್ ಕೈಯಲ್ಲಿ ಹಿಡಿದು ಓಡಾಡಿದ್ದಲ್ಲದೆ ಡ್ಯಾನ್ಸ್ ಮಾಡಿದೆ. ಈ ವಿಡಿಯೋ ಸಹ ಎಲ್ಲ್ಲೆಡೆ ವೈರಲ್ ಆಗಿದೆ. ಜೇವರ್ಗಿ ರಸ್ತೆಯಲ್ಲೂ ಯುವಕರು ತಲ್ವಾರ್ ಝಳಪಿಸಿ ರಸ್ತೆ ಮೇಲೆ ಸುತ್ತಾಡಿದ್ದರು. ನಗರದ ಮೊಮಿನ್ಪುರದಲ್ಲಿ ಮನೆಯೊಂದರ ಬೀಗ ಒಡೆದು 50 ಲಕ್ಷ ಮೌಲ್ಯದ ನಗ-ನಾಣ್ಯ ಲೂಟಿ ಮಾಡಲಾಗಿದೆ. ಬಸ್ಗಳಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ನಲ್ಲಿನ ಚಿನ್ನಾಭರಣ ಕಳವು ನಡೆದಿವೆ. ಸಿಟಿ ಬಸ್ ನಿಲ್ದಾಣದಲ್ಲಿಯೇ ಜನರು ನೋಡನೋಡುತ್ತಿದ್ದಂತೆ ಕಲ್ಯಾಣ ಕನರ್ಾಟಕ ಸಾರಿಗೆ ಸಂಸ್ಥೆ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೀಗೆ ಒಂದಿಲ್ಲೊಂದು ಪ್ರಕರಣ ಸಹಜವೇ ಜನರ ನೆಮ್ಮದಿಗೆ ಭಂಗ ತಂದಿದೆ.

ನಗರದ ರಿಂಗ್ರೋಡ್ ಸುತ್ತಲಿನ ಬಡಾವಣೆಗಳು ಸೇರಿ ಹಲವು ಕಡೆಗಳಲ್ಲಿ ತಡರಾತ್ರಿ ಹೋಗುವ ಬೈಕ್ ಸವಾರರಿಗೆ ಕೆಲ ಪುಂಡರು ಅಡ್ಡಗಟ್ಟಿ ಹಣ ಸುಲಿಗೆ ಮಾಡುವುದು ಸಾಮಾನ್ಯವಾಗಿದೆ. ರಿಂಗ್ ರಸ್ತೆ ಮೇಲೆ ರಾತ್ರಿ ಸಂಚಾರ ಅನೇಕರ ಆತಂಕಕ್ಕೆ ಕಾರಣವಾಗಿದೆ. ಹೀಗೆ ನಗರದಲ್ಲಿ ಕ್ರೈಂಗಳು ಮುಂದುವರೆದರೆ ಜನರು ಹೇಗೆ ಸಹಿಸಿಕೊಂಡಾರು? ಪೊಲೀಸ್ ಇಲಾಖೆ ಯಾವಾಗ ಟೈಟ್ ಆಗಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಲಿದೆ ಕಾದು ಕಾದು ನೋಡಬೇಕು.

ಆಯುಕ್ತರ ಮೇಲಿದೆ ಜಿಮ್ಮೇದಾರಿ: ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅಪರಾಧ ಮುಕ್ತ ನಗರವನ್ನು ಮಾಡಲು ಇವರ ಟೀಮ್ ಫುಲ್ ಆ್ಯಕ್ಟಿವ್ ಆಗಬೇಕಿದೆ. ಚೇತನ್ ಅವರು ಬಂದ ನಂತರ ಅಪರಾಧಿಕ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ನಡೆದಿವೆ. ಸಂಚಾರ ವ್ಯವಸ್ಥೆಯಲ್ಲಿ ಒಂದಿಷ್ಟು ಸುಧಾರಣೆ ತಂದಿದ್ದಾರೆ. ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಬಿಗಡಾಯಿಸಿರುವ ನಗರದ ಹಾಲತ್ ಕುರಿತು ಗಂಭೀರವಾಗಿಲ್ಲ ಏಕೆ ಎಂಬ ಪ್ರಶ್ನೆ ಜನರಿಗೆ ಕಾಡುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net