ಅಪಮಾನಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ ಜೈಲಿನಲ್ಲಿದ್ದ ಪತಿಗೂ ಹೃದಯಾಘಾತ

Published on

ಮೈಸೂರು:ಚಾಕು ಇರಿದು ಮಗ, ಪತಿ ಜೈಲು ಸೇರಿದ್ದರಿಂದ ಮನನೊಂದ ಮಹಿಳೆಯೊಬ್ಬರು ಅಪಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಜೈಲಿನಲ್ಲಿದ್ದ ಪತಿಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿದ್ಯಾನಗರದ ಇಂದ್ರಾಣಿ (35) ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇವರ ಪತಿ ಸಾಮ್ರಾಟ್ (45) ಜೈಲಿನಲ್ಲಿಯೇ ನಿಧನರಾಗಿದ್ದಾರೆ. ದಂಪತಿಯ ಪುತ್ರ ತೇಜಸ್ ಎರಡು ದಿನಗಳ ಹಿಂದೆ ವಿದ್ಯಾನಗರದಲ್ಲಿ ಸ್ನೇಹಿತ ಬಾಲರಾಜ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ತೇಜಸ್ ಜತೆಗೆ ತಂದೆ ಸಾಮ್ರಾಟ್, ಸಂಜಯ್, ಕಿರಣ್‌ನನ್ನು ಸಹ ಪ್ರಕರಣದಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದರು.
ಇದರಿಂದ ಅಪಮಾನ ತಾಳಲಾರದೆ ಇಂದ್ರಾಣಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದು ಸಾಮ್ರಾಟ್ ಅವರು ಮಂಗಳವಾರ ಹೃದಯಾಘಾತಕ್ಕೆ ಒಳಗಾದರು. ಈ ಸಂಬಂಧ ನಜರ್‌ಬಾದ್ ಠಾಣೆ ಹಾಗೂ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net