

ಕೆ.ಆರ್.ನಗರ: ನಾನು ಹೇಳಿದ್ದನ್ನು ಮಾಡುತ್ತೇನೆ, ಮಾಡುವುದನ್ನೇ ಹೇಳುತ್ತೇನೆ. ಆದರೆ ಕೆಲವರು ಅಪಪ್ರಚಾರದ ರಾಜಕಾರಣ ಮಾಡುತ್ತಿರುವುದರಿಂದ ನೊಂದಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ 23 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿದ್ದಾಪುರ ಗ್ರಾಮಕ್ಕೆ ಪಂಚಾಯಿತಿ ಮಂಜೂರಾತಿ ಮಾಡಿಸುವ ಜತೆಗೆ ಆಡಳಿತ ಕಚೇರಿ ನಿರ್ಮಾಣ ಮಾಡಲು ಸಹಕಾರ ನೀಡಲಾಗಿದೆ. ಡಿ.ಕೆ.ಕೊಪ್ಪಲು ಮತ್ತು ಸಿದ್ದಾಪುರ ಈ ಹಿಂದೆ ಗ್ರೂಪ್ ಪಂಚಾಯಿತಿ ಇದ್ದ ಕಾರಣಕ್ಕಾಗಿ ಸಿದ್ದಾಪುರ ಮತ್ತು ಡಿ.ಕೆ.ಕೊಪ್ಪಲು ಗ್ರಾಮ ಪಂಚಾಯಿತಿ ಎಂದು ನಾಮಫಲಕ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ 28 ದಿನಗಳ ಕಾಲ ಹಳ್ಳಿಹಳ್ಳಿ ಸುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನಲ್ಲಿ 324 ದೇವಾಲಯ ನಿರ್ಮಾಣ ಮಾಡಲಾಗಿದೆ. ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಲು ಸರ್ಕಾರದ ವಿವೇಕ ಯೋಜನೆಯಡಿ ಹಣ ಮಂಜೂರಾಗಿದ್ದು, 21 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿ. ಮುಂಬರುವ ಚುನಾವಣೆಯಲ್ಲಿ ಸೋಲಾದರೆ ಮುಂದೆ ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಜತೆಗೆ ಬೇರೆ ಪಕ್ಷ ಅಥವಾ ಬೇರೆ ಕ್ಷೇತ್ರಕ್ಕೂ ಪಲಾಯನ ಮಾಡುವುದಿಲ್ಲ ಎಂದರು.
ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿದ್ದಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ಯಾಗರಾಜು, ಉಪಾಧ್ಯಕ್ಷೆ ರಾಜಮ್ಮ ಕೃಷ್ಣಯ್ಯ, ಸದಸ್ಯೆ ಸರ್ವಮಂಗಳಾ, ಮಾಜಿ ಸದಸ್ಯರಾದ ಸುರೇಶ್, ರಾಚಯ್ಯ, ಬಿಇಒ ಟಿ.ಎನ್.ಗಾಯತ್ರಿ, ಬಿಆರ್‌ಸಿ ವೆಂಕಟೇಶ್, ಶಾಲೆ ಮುಖ್ಯಶಿಕ್ಷಕ ಪುಟ್ಟಯ್ಯ, ಸಹ ಶಿಕ್ಷಕ ರಾಜಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಸಂಪತ್, ಮುಖಂಡರಾದ ಕೃಷ್ಣೇಗೌಡ, ಸತೀಶ್, ಸಂತೋಷ್, ಜಿಪಂ ಎಇಇ ವಿನುತ್, ಎಇ ಓಂಕಾರ್ ಮತ್ತಿತರರು ಇದ್ದರು.