ಅಪಘಾತ ಪ್ರಕರಣ: ತಲೆಮರೆಸಿಕೊಂಡಿದ್ದ ಕಾರು ಚಾಲಕನ ಬಂಧನ

accident raichur
Published on

ಬೆಂಗಳೂರು: ನಗರದ ಕೆಂಪೇಗೌಡ ವೃತ್ತದಲ್ಲಿ ನಡೆದಿದ್ದ ಅಪಘಾತ ಪ್ರಕರಣದ ಆರೋಪಿ ಕಾರು ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಖಾಜಾ ಮೊಹಿದ್ದೀನ್ (೨೪) ಬಂಧಿತ ಕಾರು ಚಾಲಕ. ನ.೧೩ರಂದು ಮುಂಜಾನೆ ೨ ಗಂಟೆಗೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರೊಂದು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸವಾರ ಶಶಿಕುಮಾರ್(೨೦) ಮೃತಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಸಂಚಾರ ಪೊಲೀಸರು ಕಾರನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸವಾರ ಮೇಲೆ ಹರಿದಿದ್ದ ಕಾರು:

ಬಾಗೇಪಲ್ಲಿ ಮೂಲದ ಶಶಿಕುಮಾರ್ ಪೀಣ್ಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ನ.೧೩ರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಬರುತ್ತಿದ್ದರು. ಮಾರ್ಗ ಮಧ್ಯೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಎದುರಿನಿಂದ ಕಾರೊಂದು ವೇಗವಾಗಿ ಬರುವುದನ್ನು ನೋಡಿ ಬ್ರೇಕ್ ಹಾಕಿದ ಪರಿಣಾಮ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಚಾಲಕ ಕಾರನ್ನು ಶಶಿಕುಮಾರ್ ಮೇಲೆಯೇ ಹತ್ತಿಸಿಕೊಂಡು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸವಾರ ಶಶಿಕುಮಾರ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ.

ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಸೆರೆ:

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನಿಂದ ನೆಲಮಂಗಲ ಟೋಲ್‌ವರೆಗೂ ೨೦೦ ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಿದ ವೇಳೆ ಕಾರೊಂದರ ದೃಶ್ಯ ಸೆರೆಯಾಗಿತ್ತು. ಈ ಕಾರಿನ ಕಾರಿನ ನೊಂದಣಿ ಸಂಖ್ಯೆ ಆಧರಿಸಿ ಮಾಲೀಕ ಮಂಜುನಾಥನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಕಾರು ಚಾಲಕ ಖಾಜಾ ಮೊಹಿದ್ದೀನ್‌ನನ್ನು ಪತ್ತೆ ಮಾಡಿ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net