

ಕಳಸ: ನವರಾತ್ರಿ ಮಹೋತ್ಸವದ ಎರಡನೇ ದಿನ ಮಂಗಳವಾರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿ ಗಜಾರೂಢಾ ಬ್ರಹ್ಮಚಾರಿಣಿ ಅಲಂಕಾರದಲ್ಲಿ ಕಂಗೊಳಿಸಿದಳು. ಬೆಳಗಿನ ಜಾವವೇ ಭಕ್ತರ ಸಹಭಾಗಿತ್ವದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಮಂಗಳಾರತಿ ನೆರವೇರಿಸಲಾಯಿತು.
ಗಜಾರೂಢಾ ಬ್ರಹ್ಮಚಾರಿಣೀ ರೂಪವು ತೇಜಸ್ವಿ, ಶಾಂತಿ ಹಾಗೂ ಭಕ್ತಿ ಭಾವದ ಸಂಕೇತವಾಗಿ ಭಕ್ತರ ಮನಸ್ಸಿಗೆ ಅಪಾರ ಆನಂದ ನೀಡಿತು. ಭಕ್ತರು ದಿನವಿಡೀ ಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವಿದ್ವಾನ್ ಡಾ. ಎಂ.ವಿ.ಶ್ರೀನಿವಾಸಮೂರ್ತಿ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ವಿದುಷಿ ಸುಪ್ರಿಯಾ ಶಿವರುದ್ರಪ್ಪ ಮತ್ತು ತಂಡದಿಂದ ನೃತ್ಯ ಸಂಕೀರ್ತನೆ ನಡೆಯಿತು.