

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟ ಹಾಗೂ ಪಟ್ಟಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಹತ್ತುವ ಸಮಯದಲ್ಲಿ ಕಳ್ಳತನವಾಗುತ್ತಿರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ತೆರಳುವ ವ್ಯಕ್ತಿಗಳ ಹಾಗೂ ಸಾರ್ವಜನಿಕರ ಬೆರಳಚ್ಚುಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಬ್‌ಇನ್ಸ್‌ಪೆಕ್ಟರ್ ಚಂದ್ರಹಾಸ್, ಶನಿವಾರ, ಭಾನುವಾರ ಸೇರಿದಂತೆ ವಿಶೇಷ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಳಿಗಿರಿರಂಗನಬೆಟ್ಟ, ಕೊಳ್ಳೇಗಾಲ, ನಂಜನಗೂಡು, ಮೈಸೂರು ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಿಗೆ ಪ್ರಯಾಣಿಕರು ಹತ್ತುವಾಗ, ಇಳಿಯುವಾಗ ಪ್ರಯಾಣಿಕರನ್ನು ಗಮನಿಸುವ ಕಳ್ಳರ ತಂಡ ಕಳ್ಳತನ ಮಾಡಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.
ಹೀಗಾಗಿ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬೆರಳಚ್ಚುಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಪಡೆದುಕೊಂಡು ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಜತೆಗೆ ಪ್ರಯಾಣಿಕರು ಎಚ್ಚರಿಕೆಯಿಂದ ಚಿನ್ನ, ಹಣ ಹಾಗೂ ಅಗತ್ಯ ವಸ್ತುಗಳ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾನ್‌ಸ್ಟೆಬಲ್‌ಗಳಾದ ನಾಗೇಂದ್ರ, ಮಹೇಶ್, ಕವಿತಾ, ದಿವ್ಯಾ ಇತರರು ಇದ್ದರು.