

ಗಜೇಂದ್ರಗಡ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಸಿ, ಎಸ್‌ಟಿ ಅನುದಾನ ಸಮರ್ಪಕ ಬಳಕೆ ಮತ್ತು ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸದ ಕುಂಟೋಜಿ ಪಿಡಿಒ ಅಮಾನತಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಸಿ, ಎಸ್‌ಟಿ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸುತ್ತಿದ್ದಾರೆ. 13 ಪಂಚಾಯಿತಿಗಳಿಗೆ ನಾಲ್ಕೈದು ಪಿಡಿಒಗಳಿದ್ದು, ಅಭಿವೃದ್ಧಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಪಿಡಿಒ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಕುಂಟೋಜಿ ಪಿಡಿಒ ಮಹಾಂತೇಶ ತಳವಾರ ಅವರು ದನದ ಶೇಡ್, ವಿವಿಧ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಬಿಲ್ ಮಾಡಲು ಸತಾಯಿಸುತ್ತಿದ್ದಾರೆ. ಗ್ರಾಮಗಳಲ್ಲಿ ಹಣ ಕೊಟ್ಟವರಿಗೆ ಇ-ಸ್ವತ್ತು ಉತಾರ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಜಿಪಿಎಸ್ ಮಾಡಿ ಅದರ ಪೋಟೋ ಮೇಲಧಿಕಾರಿಗಳಿಗೆ ಕಳಿಸುತ್ತಿಲ್ಲ. ಇದರಿಂದ ಫಲಾನುಭವಿಗಳು ಅನುದಾನ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಪಿಡಿ ಎಂ.ವಿ. ಚಳಗೇರಿ ಭೇಟಿ ನೀಡಿ ಮಾತಕತೆ ನಡೆಸಿ, ಪಿಡಿಒ ಮೇಲಿನ ಆರೋಪ ಕುರಿತು ತನಿಖೆಗೆ ತಂಡ ರಚಿಸಿ ಅವರಿಂದ ಬಂದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು. ಆದರೆ, ಅಮಾನತು ಮಾಡುವ ಕುರಿತು ಲಿಖಿತ ಭರವಸೆಗೆ ಪಟ್ಟು ಹಿಡಿದರು. ಹೀಗಾಗಿ, ರಾತ್ರಿ 8ರವರೆಗೆ ಪ್ರತಿಭಟನೆ ಮುಂದುವರಿಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ದುರಗಪ್ಪ ಕಟ್ಟಿಮನಿ, ತಾಲೂಕು ಸಮಿತಿ ಅಧ್ಯಕ್ಷ ಯಮನೂರಪ್ಪ ಹರಿಜನ, ಯಮನೂರಪ್ಪ ಅಬ್ಬಿಗೇರಿ, ಶಿವಕುಮಾರ ಜಾಧವ, ಎಸ್.ಎಂ.ಪೂಜಾರ, ಮುತ್ತಪ್ಪ ಹುಣಸಿಮರದ, ಮಲ್ಲೇಶ ಪೂಜಾರ, ಧಮೇರ್ಂದ್ರ ಮಾದರ, ಯಚ್ಚರಪ್ಪ ಮಾದರ, ಮಾರುತಿ ಮಾದರ ಇತರರು ಇದ್ದರು.