ಅನುದಾನ ದುರುಪಯೋಗವಾದರೂ ಕ್ರಮ ವಹಿಸದ ಸರ್ಕಾರ

Published on

ಚಾಮರಾಜನಗರ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆಗೆ ಗೋಶಾಲೆ ಹಾಗೂ ಮೇವು ನಿಧಿ ತೆರೆಯಲು ಬಿಡುಗಡೆಯಾಗಿದ್ದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ತಹಸೀಲ್ದಾರ್ ಕಾಮಾಕ್ಷಮ್ಮ ವಿರುದ್ಧ ದೂರು ನೀಡಿ 3 ವರ್ಷ ಕಳೆದಿದ್ದರೂ ಇನ್ನೂ ಸರ್ಕಾರ ಯಾವುದೇ ಕ್ರಮವಹಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗಣಿಗನೂರು ಗೋವಿಂದರಾಜು ಆರೋಪಿಸಿದರು.


2016 ರಿಂದ 2018 ರ ತನಕ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಗೋಶಾಲೆ ಹಾಗೂ ಮೇವು ನಿಧಿ ತೆರೆಯಲು ಸರ್ಕಾರ 4 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಅಂದಿನ ತಹಸೀಲ್ದಾರ್ ಕಾಮಾಕ್ಷಮ್ಮ ಯಾವುದೇ ಗೋಶಾಲೆ, ಮೇವು ನಿಧಿ ತೆರೆಯದೆ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ತಹಸೀಲ್ದಾರ್ ವಿರುದ್ಧ ದೂರು ನೀಡಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ತಹಸೀಲ್ದಾರ್ ಕಾಮಾಕ್ಷಮ್ಮ ವಿರುದ್ಧ 4 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಆದರೆ, ತಹಸೀಲ್ದಾರ್ ಹುದ್ದೆ ಗೆಜೆಟೆಡ್ ಹುದ್ದೆಯಾಗಿರುವುದರಿಂದ ಸರ್ಕಾರದ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ. ಆದರೆ ಸರ್ಕಾರ ಕಾಮಾಕ್ಷಮ್ಮ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ತಹಸೀಲ್ದಾರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಶ್ರೇಯಸ್, ಮುಖಂಡರಾದ ಚಂದ್ರಶೇಖರ್, ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net