ಅನಗತ್ಯ ಹೊರೆ ತಪ್ಪಿಸಲಿದೆ ಸ್ಟಾಟಿಕ್ ಮೀಟರ್

mesco
ತರೀಕೆರೆಯಲ್ಲಿ ಮೆಸ್ಕಾಂ ಸಿಬ್ಬಂದಿ ಮನೆಗೆ ಸ್ಟಾಟಿಕ್ ಮೀಟರ್ ಅಳವಡಿಸುತ್ತಿರುವುದು.
Published on

ಬಿ.ಉಮೇಶ್‌ನಾಯ್ಕ ತರೀಕೆರೆ: ಮೆಸ್ಕಾಂನಿಂದ ಈ ಹಿಂದೆ ಮನೆಗಳಿಗೆ ಅಳವಡಿಸಿದ್ದ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್ ಬದಲಾಯಿಸಿ ಆಧುನಿಕ ಸ್ಟಾಟಿಕ್ ಮೀಟರ್ ಅಳವಡಿಸಲಾಗುತ್ತಿದೆ. ಇದರಿಂದ ವಿದ್ಯುತ್ ರೀಡಿಂಗ್ ನಿಖರವಾಗಲಿದ್ದು ಗ್ರಾಹಕರಿಗೆ ಅನವಶ್ಯಕ ಹೊರೆ ತಪ್ಪಲಿದೆ. ಜತೆಗೆ ಮೆಸ್ಕಾಂಗೆ ನಷ್ಟ ತಪ್ಪಲಿದೆ.
ತಾಲೂಕಿನಲ್ಲಿ ಚಾಲ್ತಿಯಲ್ಲಿರುವ 60 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಳಕೆದಾರರ ಪೈಕಿ 13 ಸಾವಿರದಷ್ಟು ಗ್ರಾಹಕರು 25 ವರ್ಷಕ್ಕೂ ಅಧಿಕ ಸಮಯದಿಂದ ಬಳಸುತ್ತಿದ್ದ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್‌ಗಳನ್ನು ಬದಲಾಯಿಸಲಾಗುವುದು. ಇಂಥ ಬದಲಾವಣೆಗೆ ವಾರದ ಹಿಂದೆ ಚಾಲನೆ ದೊರೆತಿದ್ದು, ಮೊದಲ ಹಂತದ ಎಲೆಕ್ಟ್ರೋ ಮೆಕ್ಯಾನಿಕಲ್ ಅಥವಾ ಡಯಲ್ ಮೀಟರ್ ತೆರವುಗೊಳಿಸಲಾಗುತ್ತಿದೆ. ತರೀಕೆರೆ ಉಪ ವಿಭಾಗ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿ 1,250 ಹಳೆಯ, ಜತೆಗೆ ಕೆಟ್ಟು ನಿಂತ ವಿದ್ಯುತ್ ಮಾಪಕಗಳನ್ನು ಬದಲಾಯಿಸಲಾಗುತ್ತಿದೆ. ಮೆಸ್ಕಾಂ ಸಿಬ್ಬಂದಿ ಮನೆ ಮನೆಗೆ ತೆರಳಿ ಹಳೇ ಮೀಟರ್ ಬದಲಾಯಿಸಿ ಸ್ಟಾಟಿಕ್ ಮಾಪನ ಅಳವಡಿಸುತ್ತಿದ್ದಾರೆ. ಸದ್ಯದಲ್ಲೇ ಎರಡನೇ ಹಂತದ ಮೀಟರ್ ತೆರವುಗೊಳಿಸುವ ಕಾರ್ಯ ಆರಂಭವಾಗಲಿದೆ.
ಎಲೆಕ್ಟ್ರೋ ಮೆಕ್ಯಾನಿಕಲ್ ವಿದ್ಯುತ್ ಮಾಪಕದಿಂದ ಗ್ರಾಹಕರಿಗೆ ಸರಾಸರಿ ಬಿಲ್ ನಿಗದಿಗೊಳಿಸಲೇಬೇಕಾದ ಸಂದಿಗ್ಧತೆ ಮೆಸ್ಕಾಂ ಅನುಭವಿಸುತ್ತಿತ್ತು. ಈ ಪ್ರಕ್ರಿಯೆಯಿಂದ ಕೆಲ ಗ್ರಾಹಕರು ಬೇಕಾಬಿಟ್ಟಿ ವಿದ್ಯುತ್ ಬಳಸಿ ಮೆಸ್ಕಾಂಗೆ ನಷ್ಟ ಉಂಟು ಮಾಡಿದರೆ, ಮತ್ತೆ ಕೆಲ ಗ್ರಾಹಕರು ಕಡಿಮೆ ವಿದ್ಯುತ್ ಬಳಸಿದರೂ ನಿಗದಿತ ಬಿಲ್ ಪಾವತಿಸಿ ಹೆಚ್ಚುವರಿ ಹೊರೆ ಹೊರಬೇಕಾಗಿತ್ತು. ಈ ಎರಡೂ ಸಮಸ್ಯೆಗಳಿಗೆ ಸ್ಟಾಟಿಕ್ ಮೀಟರ್ ಪರಿಹಾರವಾಗಲಿದೆ.
ಸ್ಟಾಟಿಕ್ ಮೀಟರ್ ತ್ವರಿತ ರೀಡಿಂಗ್ ತೆಗೆದುಕೊಳ್ಳುವುದಲ್ಲದೆ ನಿಖರ ಮಾಪನ ದಾಖಲಿಸುವ ಮೂಲಕ ವಿದ್ಯುತ್ ಬಳಕೆದಾರರ ಹೊರೆ ತಗ್ಗಿಸಿ ಮೆಸ್ಕಾಂಗೆ ನಷ್ಟ ತಪ್ಪಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net