

ಜಗದೀಶ ಹೊಂಬಳಿ ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ 9ರಿಂದ 19ರ ವರೆಗೆ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಈ ಬಾರಿಯೂ ಪ್ರತಿಭಟನೆಗಳ ಬಿಸಿ ತಟ್ಟಲಿದೆ.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಹೊತ್ತು ರಾಜ್ಯ ವಿವಿಧೆಡೆಯಿಂದ ಪ್ರತಿಭಟನಾಕಾರರ ದಂಡೇ ಬರುತ್ತದೆ. ಈ ಬಾರಿಯೂ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ಸಂಘಟನೆಗಳು ಬೆಳಗಾವಿಗೆ ಬರುವುದಕ್ಕೆ ಸಿದ್ಧತೆ ಕೈಗೊಂಡಿದ್ದು, ಸರ್ಕಾರದ ಮೇಲೆ ಒತ್ತಡ ಹಾಕಲಿವೆ.
ರೈತರು, ಕಾರ್ಮಿಕರು, ದಲಿತ ಸಂಘಟನೆಗಳು, ವಿವಿಧ ಸಮುದಾಯಗಳ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದಕ್ಕೆ ಬೆಳಗಾವಿಯತ್ತ ಬರುವುದಕ್ಕೆ ಮುಖ ಮಾಡಿವೆ. ಪ್ರತಿಭಟನೆಗೆ ಅನುಮತಿ ನೀಡುವಂತೆ ಈಗಾಗಲೇ 55 ಸಂಘಟನೆಗಳು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಡಿ.9ರ ವರೆಗೂ ಪ್ರತಿಭಟನೆಗಳಿಗೆ ಅನುಮತಿ ನೀಡುವಂತೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಪೊಲೀಸ್ ಆಯುಕ್ತರ ಕಚೇರಿಗೆ ಬರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನುಮತಿಗೆ ಕಮಿಟಿ ರಚನೆ: ಪ್ರತಿಭಟನೆಗಳಿಗೆ ಅನುಮತಿ ನೀಡುವುದಕ್ಕೆ ಕಮಿಟಿ ರಚಿಸಲಾಗಿದೆ. ಕಮಿಟಿಯಲ್ಲಿ ಇಬ್ಬರು ಉಪವಿಭಾಗಾಧಿಕಾರಿಗಳು, ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಕಮಿಟಿಯಲ್ಲಿದ್ದಾರೆ. ಬಂದ ಅರ್ಜಿಗಳನ್ನು ಪರಿಶೀಲಿಸುತ್ತಾರೆ.
ಘಟನೆಗಳ ಹಕ್ಕೋತ್ತಾಯಗಳು ಏನು? ತೀವ್ರತರ ಪ್ರತಿಭಟನೆಯಾ ? ಎಂಬಿತ್ಯಾದಿ ಮಾಹಿತಿ ಪಡೆದು ಅಧಿವೇಶನದ ಮೇಲೆ ಪರಿಣಾಮ ಬೀರದಂತೆ ಪ್ರತಿಭಟನೆಗಳು ನಡೆಯುವಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ಕಳೆದ ಅಧಿವೇಶನದಲ್ಲಿ ಗಲಾಟೆ, ತಕರಾರು ಮಾಡಿದ ಸಂಘಟನೆಗಳಿಗೆ ಈ ಬಾರಿ ಅಧಿವೇಶನದ ವೇಳೆ ಪ್ರತಿಭಟನೆಗೆ ಅವಕಾಶ ಕೊಡಬಾರದು ಎಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಈಗಾಗಲೇ ಕೆಲ ಸಂಘಟನೆಗಳಿಗೆ ಅನುಮತಿ: ಈ ಬಾರಿ ಡಿ.5ರ ವರೆಗೆ 55 ಸಂಘಟನೆಗಳು ಪ್ರತಿಭಟನೆಗೆ ಅನುಮತಿ ನೀಡುವಂತೆ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿವೆ. ಈ ಪೈಕಿ 13 ಸಂಘಟನೆಗಳಿಗೆ ಪೊಲೀಸ್ ಇಲಾಖೆಯಿಂದ ಈಗಾಗಲೇ ಅನುಮತಿ ದೊರೆತಿದೆ.
ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮುಂಡರಗಿ ತಾಲೂಕು ಹೋರಾಟ ಸಮಿತಿ, ಹುಬ್ಬಳ್ಳಿಯ ಅಕ್ಕಾ ಫೌಂಡೇಷನ್ ಟ್ರಸ್ಟ್, ಹು-ಧಾ ವಾರ್ಡ್ ಸಮಿತಿ ಬಳಗ, ಅಖಂಡ ಕರ್ನಾಟಕ ಹೂಗಾರ ಮಹಾಸಭಾ, ಪಟ್ಟಣ ಪಂಚಾಯಿತಿ ಗ್ರಂಥ ಮೇಲ್ವಿಚಾರಕರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ಕ್ಷತ್ರೀಯ ಮರಾಠ ಒಕ್ಕೂಟ, ಉತ್ತರ ಕರ್ನಾಟಕ ಮಡಿವಾಳ ಸಂಘ, ರಾಯಬಾಗದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಡಿಎಸ್‌ಎಸ್ ಸಮಿತಿ, ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಷತ್‌ಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಕಮಿಟಿಯಲ್ಲಿ ಈ ಸಂಘಟನೆಗಳ ಅರ್ಜಿಗಳನ್ನು ಪಾಸ್ ಮಾಡಲಾಗಿದೆ. ಇದ್ದಲ್ಲೇ ಮನವಿಯಷ್ಟೇ ಸಲ್ಲಿಸಲಿರುವ 5 ಸಂಘಟನೆಗಳಿಗೂ ಅನುಮತಿ ನೀಡಲಾಗಿದೆ. ಕಳೆದ ಬಾರಿ 74 ಪ್ರತಿಭಟನೆಗಳು ಆಗಿದ್ದವು. ಈ ಬಾರಿ 100ರ ಗಡಿ ದಾಟಲಿದೆ ಎನ್ನಲಾಗಿದೆ.
ಬೇಡಿಕೆ ಈಡೇರಿಕೆಗಾಗಿ ಹೋರಾಟ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವುದು, ತಾಲೂಕು ರಚನೆ, ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕ ವಾರ್ಡ್ ಸಮಿತಿ ರಚಿಸುವುದು, ಹೂಗಾರ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವುದು, ಅಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ-ಸೇವಾ ಭದ್ರತೆ ಕಲ್ಪಿಸುವುದು, ಕ್ಷತ್ರೀಯ ಸಮುದಾಯಕ್ಕೆ 3ಬಿ ನಿಂದ 2ಎಗೆ ಮೀಸಲಾತಿ ಕಲ್ಪಿಸುವುದು, ಬಿಪಿಎಲ್ ಕಾರ್ಡ್ ರದ್ಧತಿ ಕೈ ಬಿಡುವುದು, ಎಸ್‌ಸಿ/ಎಸ್ಟಿ ಹಣ ಸದ್ಬಳಕೆ, ಒಳ ಮೀಸಲಾತಿ, ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಸ್ಮಶಾನ ಭೂಮಿ, ಪೌರ ಕಾರ್ಮಿಕರನ್ನು ಕಾಯಂ ಮಾಡುವುದು ಹಾಗೂ ಪಾರಂಪರಿಕ ವೈದ್ಯರ ಅಭಿವೃದ್ಧಿ ನಿಗಮ ರಚಿಸುವಂತೆ ಪ್ರತಿಭಟನೆಗಳು ನಡೆಯಲಿವೆ.
ಪಂಚಮಸಾಲಿ ಸಮುದಾಯದಿಂದ ಮುತ್ತಿಗೆ?: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿಯೇ ಹಾಕುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ಸಮುದಾಯದ ಹಾಲಿ, ಮಾಜಿ ಶಾಸಕರು ಸಭೆ ನಡೆಸಿದ್ದಾರೆ. ಈ ಪ್ರತಿಭಟನೆ ಬಿಸಿ ಅಧಿವೇಶನಕ್ಕೆ ತಟ್ಟಬಹುದು.
ಇಲ್ಲಿಯವರೆಗೆ 55 ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿವೆ. ಪರಿಶೀಲಿಸಿ, ಅನುಮತಿ ನೀಡುತ್ತೇವೆ. |ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪೊಲೀಸ್ ಆಯುಕ್ತ ಬೆಳಗಾವಿ