ಅಧಿಕಾರಿಗಳು ತಮ್ಮ ವರ್ತನೆಯನ್ನು ದಲಾಯಿಸಿಕೊಳ್ಳಬೇಕು / ಹಳೇ ಚಾಳಿ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ / ಸಿ.ಎಂ. ಸಿದ್ಧರಾಮಯ್ಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಅಧಿಕಾರಿಗಳು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಹಳೇ ಚಾಳಿ ಮುಂದುವರೆದರೆ ಸಹಿಸುವುದಿಲ್ಲ. ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನಿಡಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇಲಾಖಾವಾರು ಮಾಹಿತಿ ಪಡೆದುಕೊಂಡ ಸಿಎಂ ಪ್ರಗತಿ ಸಾಧನೆ ಕುರಿತು ಅಸಮಾಧಾನ ಹೊರ ಹಾಕಿ, ತಮ್ಮ ಹಳೇ ಚಾಳಿಯನ್ನು ಬದಲಾಯಿಸಿಕೊಳ್ಳಬೇಕೆಂದು ಎಚ್ಚರಿಕೆ ನೀಡಿ, ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಣ್ಣಪುಟ್ಟ ಸಮಸ್ಯೆಗಳನ್ನು ಎತ್ತಿಕೊಂಡು ನನ್ನ ಬಳಿಗೆ ಬಂದರೆ ಜಿಲ್ಲಾಡಳಿತ ವಿಫಲ ಎಂದು ಪರಿಗಣಿಸಬೇಕಾಗುತ್ತದೆ. ಜನರ ಹಣದಿಂದ ಸೌಲಭ್ಯಗಳು ಸಿಗುತ್ತಿದ್ದು, ನಾವು ಜನರ ಪರವಾಗಿ ಇರಬೇಕು. ರೈತರನ್ನು ಪೊಲೀಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸತಾಯಿಸಬಾರದು. ಇದನ್ನು ನಾನು ಸಹಿಸುವುದಿಲ್ಲ, ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಎಸ್ಪಿಗಳು ಪೊಲೀಸ್ ಠಾಣೆಗೆ ನಿರಂತರವಾಗಿ ಭೇಟಿನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಬಾಲ ವಿವಾಹಗಳನ್ನು, ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಈ ಬಗ್ಗೆ ಸಾಕಷ್ಟು ಮಾಹಿತಿ ಬಂದಿದ್ದು, ಈ ಬಗ್ಗೆ ಏನು ಕ್ರಮ ಕೈಗೊಂಡಿದೀರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳಿಂದ ಸಮರ್ಪಕವಾಗಿ ಉತ್ತರ ಬಾರದಿದ್ದಾಗ ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರವಹಿಸಬೇಕು, ಮರು ಕಳುಹಿಸಿದರೆ ಕಾನೂನು ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.

ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇರುವ ಕೇಸುಗಳ ಬಗ್ಗೆ ಅಧಿಕಾರಿಗಳಿಂದ ಪ್ರತ್ಯೇಕ ವಿವರ ಪಡೆದುಕೊಂಡ ಸಿಎಂ, ಆದಷ್ಟು ಬೇಗ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು ಎಂದು ತಿಳಿಸಿದರು.

ರೆವಿನ್ಯೂ ಮತ್ತು ಅರಣ್ಯ ಭೂಮಿ ಗುರುತಿಸವ ವಿಚಾರದಲ್ಲಿ ಆಗುತ್ತಿರುವ ತೊಂದರೆ ಮತ್ತು ಗೊಂದಲಗಳನ್ನು ಬಗೆಹರಿಸಲು ಕಂದಾಯ - ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ರವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಈ ಸಮಸ್ಯೆ ರಾಜ್ಯಮಟ್ಟದಲ್ಲಿ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತಮಟ್ಟದ ಸಭೆ ಕರೆಯಲಾಗುವುದು. ಅಲ್ಲಿಯವರೆಗು ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಬಾರದು ಎಂದು ಜಿಲ್ಲಾ ಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮೊರಾರ್ಜಿ ವಸತಿ ಶಾಲೆಗಳಲ್ಲಿ ನಡೆದಿರುವ ಘಟನೆಗೆ ಸಂಬAಧಪಟ್ಟAತೆ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಉಳಿದ ಇಬ್ಬರನ್ನು ಯಾಕೆ ಇನ್ನು ಬಂಧಿಸಿಲ್ಲ ಎಂದು ಎಸ್ಪಿ ಅವರನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಉಳಿದವರನ್ನು ಬಂಧಿಸುವAತೆ ಸೂಚಿಸಿದರು.

ಈ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದ ಸಿದ್ದರಾಯ್ಯ, ಇದೊಂದು ಕ್ರೂರ ಕೃತ್ಯ, ಇಂತಹದನ್ನು ಅಪ್ಪಿತಪ್ಪಿಯೂ ಸಹಿವುದಿಲ್ಲ. ಈ ಘಟನೆ ರಾಜ್ಯ ಮತ್ತು ಜಿಲ್ಲೆಗೆ ಪಾಠ ಕಲಿಸಿದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮರುಕಳುಹಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ವಸತಿ ಶಾಲೆಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು, ಆ ಸಂದರ್ಭದಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಕೂಡಲೇ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರಲ್ಲದೆ ಎಲ್ಲಾ ಹೋಬಳಿಗಳಲ್ಲಿ ಇರುವ ವಸತಿ ಶಾಲೆಗಳಲ್ಲಿರುವ ಗೊಂದಲ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಇದೇ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ವಸತಿ ಶಾಲೆಗಳೊಳಗೆ ಪೋಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಹೀಗೆ ಮಾಡುವುದರಿಂದ ಅಲ್ಲಿನ ಗುಣಮಟ್ಟದ ಬಗ್ಗೆ ಪೋಷಕರಿಗೆ ಗೊತ್ತಾಗುತ್ತದೆ, ವಸತಿ ಶಾಲೆಗಳು ಜೈಲುಗಳು ಎಂಬ ಭಾವೆನೆ ಹೋಗುತ್ತದೆ ಎಂದು ಸಲಹೆ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ ಇರುವ ಸರ್ಕಾರಿ ಜಮೀನು ಮತ್ತು ಕೆರೆಗಳು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ಮತ್ತು ತೆರವು ಕುರಿತು ತಹಶೀಲ್ದಾರ್‌ಗಳು ಮತ್ತು ಜಿಲ್ಲಾಧಿಕಾರಿಗಳು ಮಾಹಿತಿ ಪ್ರಕಟಿಸಬೇಕು. ಅಂಗನವಾಡಿ, ಸ್ಮಶಾನ ಮತ್ತು ಇತರೆ ಅಗತ್ಯಗಳಿಗೆ ಜಮೀನು ಮಂಜೂರು ಮಾಡಲು ಸಾಧ್ಯ, ಇದಕ್ಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಕೊಠಡಿಗಳ ಕೊರತೆ ಎಷ್ಟಿದೆ? ದುರಸ್ತಿ ಎಷ್ಟಾಗಬೇಕು? ಸರ್ಕಾರಕ್ಕೆ ವರದಿ ನೀಡಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯಾ? ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದೀರಿ? ಶಾಲೆಗಳ ಸ್ಥಿತಿಗತಿ, ಶಿಕ್ಷಕರ ಕೊರತೆ ಇದೆಯಾ? ಎಂಬ ಮಾಹಿತಿ ಒದಗಿಸಲು ಸೂಚಿಸಿದರು.

ರೆವಿನ್ಯೂ ಮತ್ತು ಸರ್ಕಾರಿ ಜಾಗವನ್ನು ಏಕಾಏಕಿ ಸೆಕ್ಷನ್ ೪ರ ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ಸೇರಿಸಿ ಕೆರೆ ಹೂಳು ತೆಗೆಯಲು ಮತ್ತಿತರೆ ಕಾರ್ಯಗಳಿಗೆ ಅರಣ್ಯಾಧಿಕಾರಿಗಳು ತೊಂದರೆ ಕೊಡಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬಾಕ್ಸ್.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಬಗ್ಗೆ ೧೧ ಗಂಟೆಗೆ ಕೆಡಿಪಿ ಸಭೆ ನಿಗಧಿ ಪಡಿಸಲಾಗಿತ್ತು, ಆದರೆ ಒಂದುವರೆ ತಾಸು ತಡವಾಗಿ ಆಗಮಿಸಿದರು. ಸಿಎಂ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ವಿವಿಧ ಘಟಕಗಳ ಕೆಲವರಿಗೆ ಮಾತ್ರ ಪಾಸ್ ವಿತರಿಸಲಾಗಿತ್ತು. ಮಾಹಿತಿಯಿಲ್ಲದೆ ಹೆಲಿಪ್ಯಾಡ್ ಸಮೀಪಕ್ಕೆ ಆಗಮಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಬಿಡದ ಕಾರಣ ಪೊಲೀಸರೊಟ್ಟಿಗೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.

ಬಾಕ್ಸ್
ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುವ ಮುನ್ನ ರೈತ ಸಂಘ, ಅತಿಥಿ ಉಪನ್ಯಾಸಕರು ಸೇರಿದಂತೆ ವಿವಿಧ ಸಂಘಸAಸ್ಥೆಗಳು ನೀಡಿದ ಮನವಿಯನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದ ಸಿ.ಎಂ. ಸಿದ್ಧರಾಮಯ್ಯ ಸಂಬAಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net