ಅಧಿಕಾರಿಗಳಿಗೆ ಉಪ ಲೋಕಾಯುಕ್ತರಿಂದ ಫುಲ್ ಕ್ಲಾಸ್

22 charan 2
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದೂರು ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಲಾಪದಲ್ಲಿ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ವೃದ್ದೆಗೆ ಮಾಹಿತಿ ನೀಡುತ್ತಿರುವುದು.
Published on

ಚಾಮರಾಜನಗರ: ಸಾರ್ವಜನಿಕರ ದೂರಿಗೆ ಸ್ಪಂದಿಸದ, ಸರ್ಕಾರಿ ಜಮೀನು ಅತಿಕ್ರಮಣ ತೆರವುಗೊಳಿಸದ, ಕ್ರಿಯಾಶೀಲತೆ ಕಳೆದುಕೊಂಡಿರುವ ಜಿಲ್ಲೆಯ ವಿವಿಧ ಇಲಾಖೆಗಳ ಕೆಲ ಅಧಿಕಾರಿಗಳಿಗೆ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಫುಲ್ ಕ್ಲಾಸ್ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರು ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಲಾಪದಲ್ಲಿ ಭಾಗವಹಿಸಿದ ಅವರು, ಮಾತಿನ ಛಾಟಿಯಲ್ಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಕೊಳ್ಳೇಗಾಲ ತಾಲೂಕಿನ ಸರ್ಕಾರಿ ಭೂಮಿ, ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಳ್ಳಲು ಕೋರಿ ಕುಣಗಳ್ಳಿ ಗ್ರಾಮದ ಕೆ.ಎಲ್.ಲಿಂಗರಾಜು ಅರ್ಜಿ ಸಲ್ಲಿಸಿದರು. ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಇದರ ವಿಚಾರಣೆ ನಡೆಸಿ, ಯಾಕೆ ಇನ್ನೂ ಸರ್ಕಾರಿ ಭೂಮಿ ಅತಿಕ್ರಮಣ ತೆರವುಗೊಳಿಸಿಲ್ಲ ಎಂದು ಕೊಳ್ಳೇಗಾಲ ತಹಸೀಲ್ದಾರ್ ಮಂಜುಳಾ ಅವರನ್ನು ತರಾಟೆಗೆ ತೆಗೆದುಕೊಂಡರು. ಒಂದು ತಿಂಗಳ ಒಳಗೆ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿ ಸಂಸ್ಥೆಗೆ ವರದಿ ಸಲ್ಲಿಸಲು ಸೂಚನೆ ನೀಡಿದರು. ಕೊಳ್ಳೇಗಾಲದಿಂದ ಸಲ್ಲಿಕೆಯಾಗಿದ್ದ ಬಹುತೇಕ ಅರ್ಜಿಗಳು ಭೂಮಿಗೆ ಸಂಬಂಧಿಸಿದ್ದವೇ ಆಗಿದ್ದವು. ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿದ ಉಪ ಲೋಕಾಯುಕ್ತರು ತಹಸೀಲ್ದಾರ್ ಮೇಲೆ ಕಿಡಿಕಾರಿದರು.
ನಿವೃತ್ತಿ ವೇತನ ದೊರೆಯುತ್ತಿಲ್ಲವೆಂದು ಹನೂರು ಪಟ್ಟಣ ಪಂಚಾಯಿತಿ ನಿವೃತ್ತ ಅಧಿಕಾರಿ ಬಿ.ಯೋಗನಾಥ್ ಸಿಂಗ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಉಪ ಲೋಕಾಯುಕ್ತರು ಈ ಬಗ್ಗೆ ಪ್ರತಿಕ್ರಿಯಿಸಿ, ತಾಲೂಕು ಪಂಚಾಯಿತಿಯ ಮುಖ್ಯಾಧಿಕಾರಿ ಮೂರ್ತಿಗೆ ನೀವು ನಿವೃತ್ತರಾದಾಗ ಇದೇ ಗತಿ ಬಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರು. ಇನ್ನೂ ಒಂದು ವಾರದಲ್ಲಿ ನಿವೃತ್ತಿ ವೇತನವನ್ನು ಕೊಡಿಸಿ ಲೋಕಾಯುಕ್ತ ಸಂಸ್ಥೆಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.

ಲೋಕಾಯುಕ್ತ ಉಪನಿಬಂಧಕ ಚೆನ್ನಕೇಶವರೆಡ್ಡಿ, ಇಬ್ರಾಹಿಂ ಮುಜಾವರ್, ಲೋಕಾಯುಕ್ತದ ಸರ್ಕಾರಿ ಅಭಿಯೋಜಕ ನಾರಾಯಣ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಲೋಕಾಯುಕ್ತ ಮೈಸೂರು ಪೊಲೀಸ್ ವಿಭಾಗ ಅಧೀಕ್ಷಕ ಎಸ್. ಸುರೇಶ್ ಬಾಬು, ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಸಣ್ಣತಮ್ಮಪ್ಪ ಒಡೆಯರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಬಿಆರ್‌ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ನಿರ್ದೇಶಕಿ ದೀಪಾ, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್ ಹಾಗೂ ಇತರರಿದ್ದರು.

ವೃದ್ಧೆ ಮೇಲಿನ ಕಾಳಜಿ : ಕೊಳ್ಳೇಗಾಲ ಪಟ್ಟಣದ ನಿವಾಸಿ, ವೃದ್ಧೆ ಎಂ.ಭ್ರಮರಾಂಬ ಕುಳಿತಿದ್ದ ಜಾಗಕ್ಕೆ ಬಂದು ಕಾಳಜಿ ತೋರಿದ ಉಪ ಲೋಕಾಯುಕ್ತ ಕೆ.ಎಸ್.ಣೀಂದ್ರ ದೂರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದರು. ಖಾತೆ ಬದಲಾವಣೆ ಹಾಗೂ ಇ-ಸ್ವತ್ತು ದಾಖಲೆಯನ್ನು ನೀಡಲು ಎಂ.ಭ್ರಮರಾಂಬ 2019ರ ಮಾ.18ರಂದು ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರು ಪರಿಶೀಲನೆ ಮಾಡಿದರು.
ಈ ವೇಳೆ ನಗರಸಭೆ ಆಯುಕ್ತ ನಂಜುಂಡಸ್ವಾಮಿ ಮಾತನಾಡಿ, ಇವರು ಮನೆ ಕಂದಾಯವನ್ನು ಪಾವತಿ ಮಾಡಿಲ್ಲ. ಆದ್ದರಿಂದ ಖಾತೆ ಮಾಡಿಕೊಟ್ಟಿಲ್ಲ ಎಂದರು. ಆಗ ಎಂ.ಭ್ರಮರಾಂಭ ಅವರ ಸಂಬಂಧಿಕರ ಬಳಿ ಕಂದಾಯ ಪಾವತಿ ಮಾಡುವಂತೆ ಉಪ ಲೋಕಾಯುಕ್ತರು ಸೂಚಿಸಿದರು. 15 ದಿನಗಳ ಒಳಗೆ ಕಂದಾಯ ಪಾವತಿ ಮಾಡುವುದಾಗಿ ಲೋಕಾಯುಕ್ತರಿಗೆ ತಿಳಿಸಿದರು. ಕಂದಾಯ ಪಾವತಿ ಮಾಡಿದ ಕೂಡಲೇ ಸ್ಥಳ ಪರಿಶೀಲಿಸಿ ಖಾತೆ ಮಾಡಿಕೊಟ್ಟು ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net