

ಸೇವೆ ಮಾಡುವವರಿಗೆ ಅಧಿಕಾರವೇ ಮುಖ್ಯವಲ್ಲ. ಅಧಿಕಾರದಿಂದ ನಿವೃತ್ತರಾದರೂ ಕೂಡ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗೀತಾ ಪ್ರಸನ್ನ ಹೇಳಿದರು.
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್ ಮಾನಸ ಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮೈವಿವಿ ವೈದ್ಯಾಧಿಕಾರಿ ಡಾ.ಎಂ.ಎಸ್.ಬಸವರಾಜ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಡಾ.ಎಂ.ಎಸ್. ಬಸವರಾಜ್ ಅವರು ಇತರ ವೈದ್ಯರಿಗೆ ಮಾದರಿಯಂತಿದ್ದಾರೆ. ಸದಾ ಸುಂದರ, ಮುಗ್ಧ ನಗುಮುಖದೊಂದಿಗೆ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ಈ ರೀತಿ ಅರ್ಪಣಾ ಮನೋಭಾವದಿಂದ ಸೇವೆ ಮಾಡಿದರೆ ಸಾಕು ರೋಗ ಗುಣಮುಖವಾದಂತೆ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಸಂದರ್ಭದಲ್ಲಿ ನಾವೆಲ್ಲಾ ಅನಿಶ್ಚತತೆ. ಅಭದ್ರತೆಯಿಂದ ಇದ್ದಾಗ ವೈದ್ಯರು ಚಿಕಿತ್ಸೆ ನೀಡಿ ಕಾಪಾಡಿದರು. ಈ ದೃಷ್ಟಿಯಿಂದ ನೋಡಿದರೆ ವೈದ್ಯರನ್ನು ದೇವರು ಎಂದು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಮಲ್ಲಿಕ್, ಮೈಸೂರು ನಗರಪಾಲಿಕೆಯ ನಿವೃತ್ತ ಆಯುಕ್ತ ಡಾ.ಪಿ. ಬೋರೇಗೌಡ, ಮೈವಿವಿ ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ಮಾನಸ ಗಂಗೋತ್ರಿ ವಿದ್ಯಾರ್ಥಿ ಕ್ಷೇಮುಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ದಿವಾಕರ್ ಚಾಂಡಿ ಅವರಿಗೆ ಉನ್ನತ ಸೇವಾ ಪ್ರಶಸ್ತಿ ನೀಡಲಾಯಿತು. ಎನ್‌ಸಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.