

ಶಿವಮೊಗ್ಗ: ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಬೆನ್ನಲ್ಲೇ ಎರಡು ದಿನದ ಅಂತರದಲ್ಲಿ ಸಿಹಿಮೊಗ್ಗೆಯೆ ಮತ್ತೊಂದು ಪ್ರತಿಷ್ಠಿತ ಓಂ ಗಣಪತಿಯ ರಾಜಬೀದಿ ಉತ್ಸವ ಶನಿವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.
ಅಶೋಕ ರಸ್ತೆಯಿಂದ ಮಧ್ಯಾಹ್ನ ಹೊರಟ ರಾಜಬೀದಿ ಉತ್ಸವದ ಮೂಲಕ ವಿನಾಯಕ ಮೂರ್ತಿಯು ನಗರದ ವಿವಿಧೆಡೆ ಸಂಚರಿಸಿತು.
ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಠಾಪಿಸಿದ್ದ ಓಂ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಯು ನಗರದ ವಿವಿಧೆಡೆ ಅದ್ಧೂರಿಯಾಗಿ ನೆರವೇರಿತು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರ್ಷೋದ್ಘಾರದೊಂದಿಗೆ ಉತ್ಸವ ನಡೆಯಿತು.
ಮಧ್ಯಾಹ್ನ ಅಶೋಕ ರಸ್ತೆಯಿಂದ ಆರಂಭಗೊಂಡ ರಾಜಬೀದಿ ಉತ್ಸವ ಎಸ್‌ಪಿಎಂ ರಸ್ತೆ, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಬಿ.ಎಚ್.ರಸ್ತೆ, ಕೋಟೆ ರಸ್ತೆ ಮೂಲಕ ಶಾಂತಿಯುತ ಹಾಗೂ ವೈಭವಯುತವಾಗಿ ಸಾಗಿತು.
ಉತ್ಸವಕ್ಕೆ ಕಲಾ ಮೇಳ ಮೆರುಗು
ರಾಜಬೀದಿ ಉತ್ಸವದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಚಂಡೆ, ತಟ್ಟಿರಾಯ, ವೀರಗಾಸೆ, ಕೀಲು ಕುದುರೆ, ಭಜನಾ ತಂಡಗಳು ಭಾಗವಹಿಸಿದ್ದವು. ರಾಜಬೀದಿ ಉತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಜಾನಪದ ಪ್ರಕಾರಗಳ ಮೆರುಗು ಹೆಚ್ಚಿತ್ತು. ಡೊಳ್ಳು, ಚಂಡೆಯ ನಾದಕ್ಕೆ ಮಹಿಳೆಯರು, ಮಕ್ಕಳಾದಿಯಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ ವಿಘ್ನ ನಿವಾರಕನನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.