ಅದ್ದೂರಿ ಹುಚ್ಚಮ್ಮ ದೇವಿಯ ರಥೋತ್ಸವ

ಬನ್ನೂರಿನ ಸಮೀಪದ ಬಿ. ಸೀಹಳ್ಳಿ ಗ್ರಾಮದ ಹುಚ್ಚಮ್ಮದೇವಿಯ ರಥೋತ್ಸವವು ವೈಭವಯುತವಾಗಿ ನಡೆಯಿತು.
12BANNU1
Published on

ಬನ್ನೂರು: ಬಿ.ಸೀಹಳ್ಳಿ ಗ್ರಾಮದಲ್ಲಿ ಆದಿಶಕ್ತಿ ಹುಚ್ಚಮ್ಮ ದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ಭಾನುವಾರ ಜರುಗಿತು.


ಒಂದು ವಾರದಿಂದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆಯಿಂದಲೇ ಸುತ್ತ ಮುತ್ತಲಿನ ಗ್ರಾಮಗಳಿಂದ ಭಕ್ತರು ದೊಡ್ಡಹುಚ್ಚಮ್ಮ ಹಾಗೂ ಚಿಕ್ಕ ಹುಚ್ಚಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವಿ ದರ್ಶನ ಪಡೆದರು.


ಮಂತ್ರಘೋಷಗಳು ಆರಂಭವಾದ ನಂತರ ರಥ ಸಾಗುವ ದೇವಾಲಯದ ಸುತ್ತಲ ಮಾರ್ಗವನ್ನು ಪರಿಶುದ್ಧಗೊಳಿಸಲಾಯಿತು. ಬಣ್ಣಬಣ್ಣದ ಪತಾಕೆಯಿಂದ ಕಂಗೊಳಿಸುತ್ತಿದ್ದ ರಥಕ್ಕೆ ಕಳಸವನ್ನು ಪ್ರತಿಷ್ಠಾಪಿಸಿ ಮಂಗಳ ವಾದ್ಯದ ಗಂಟೆ ಮೇಳದೊಂದಿಗೆ ಹೂವಿನಿಂದ ಅಲಂಕಾರಗೊಂಡ ಹುಚ್ಚಮ್ಮ ದೇವಿಯ ಮೂರ್ತಿಯನ್ನು ದೇವಿಯ ಪ್ರಧಾನ ಅರ್ಚಕ ಗುಡ್ಡಪ್ಪ ಛತ್ರಿ-ಚಾಮರಗಳೊಂದಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಿ ರಥದಲ್ಲಿ ಪ್ರತಿಷ್ಠಾಪಿಸಿದರು.


ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದರು. ರಥದ ಕೆಳಗೆ ಮಕ್ಕಳನ್ನು ತೂರಿಸಿ ಪುನೀತರಾದರು. ರಥಕ್ಕೆ ಹಣ್ಣು-ದವನ ಎಸೆದು ತಮ್ಮ ಹರಕೆ ತೀರಿಸಿದರು. ಕೋಲಿನ ಆಟ, ಪಿರಮಿಡ್ ನಿರ್ಮಾಣ, ಎತ್ತರ ಜಿಗಿತ ಮೊದಲಾದವು ರಥ ಸಾಗುತ್ತಿದ್ದ ಮುಂಭಾಗ ನಡೆಯುತ್ತಿತ್ತು. ಸಂಜೆ 4.30 ರ ವೇಳೆಗೆ ಆರಂಭವಾದ ರಥೋತ್ಸವವು ದೇವಾಲಯದ ಸುತ್ತ ಒಂದು ಸುತ್ತು ಮುಗಿಸಿ ದೇವಾಲಯದ ಸ್ವಸ್ಥಾನ ಸೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net