ಅದ್ದೂರಿ ಬದಲು ಅರ್ಥಪೂರ್ಣ

mlk poorava-sabe.. oct- 12 (1)
Published on

ಮೊಳಕಾಲ್ಮೂರು: ಬರಗಾಲ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಸಂದರ್ಭ ಜವಾಬ್ದಾರಿಯುತ ನಾಗರಿಕರಾದ ನಾವು ವಾಲ್ಮೀಕಿ ಜಯಂತಿಯನ್ನು ಅದ್ದೂರಿಗಿಂತಲೂ ಅರ್ಥಪೂರ್ಣ ಆಚರಿಸುವುದು ಅಗತ್ಯ ಎಂದು ನಾಯಕ ಸಮಾಜದ ತಾಲೂಕಾಧ್ಯಕ್ಷ ಕೆ.ಜಗಳೂರಯ್ಯ ಹೇಳಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಎಂ.ವಿ.ರೂಪಾ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿ ಆಚರಣೆ ಅಗತ್ಯವಿತ್ತು. ಆದರೆ, ಬರಗಾಲ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ ಸರ್ವಧರ್ಮಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ರೀತಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮೀಸಲಾತಿ ಪ್ರಮಾಣ ಹೆಚ್ಚಳ ಅನುಷ್ಠಾನಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಸಂಸದರು, ಕೇಂದ್ರ ಸಚಿವರು, ಜನಪ್ರತಿನಿಧಿಗಳು ಲೋಕಸಭೆ ಚುನಾವಣೆ ಒಳಗೆ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಬೇಕು. ಜಯಂತ್ಯುತ್ಸವದಲ್ಲಿ ಈ ಕುರಿತು ಒತ್ತಡ ತರುವ ಕೆಲಸ ಆಗಬೇಕು ಎಂದರು.

ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ತತ್ವಾದರ್ಶಗಳ ಮೂಲಕ ಸರ್ವ ಸಮುದಾಯದ ಪ್ರಗತಿಗೆ ಶ್ರಮಿಸಿದ ಮಹನೀಯರ ಜಯಂತ್ಯುತ್ಸವಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಆಚರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಜಾತಿಗೆ ಸೀಮಿತಗೊಳಿಸದೆ ಸರ್ವ ಸಮುದಾಯ, ಧರ್ಮದವರು ಪಾಲ್ಗೊಳ್ಳುವ ರೀತಿ ಆಚರಣೆ ಮಾಡಬೇಕಿದೆ ಎಂದು ಹೇಳಿದರು.

ಸರ್ಕಾರದ ಕಾರ್ಯಕ್ರಮ ಆಗಿರುವ ಕಾರಣ ಹಣಕಾಸು ಸೇರಿ ಕೆಲವು ಇತಿಮಿತಿ ಇರಲಿದೆ. ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವ ಜನರಿಗೆ ಊಟದ ವ್ಯವಸ್ಥೆ ಅಗತ್ಯು. ಜತೆಗೆ ಕಲಾತಂಡಗಳನ್ನು ಕರೆಯಿಸಬೇಕಾಗುತ್ತದೆ. ಆರ್ಥಿಕ ಹೊರೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಉಳ್ಳವರು ದೇಣಿಗೆ ನೀಡಬೇಕು ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಮೊಳಕಾಲ್ಮೂರಿನ ಗುತ್ತಿಗೆದಾರ ಸತ್ಯನಾರಾಯಣ 26, ನಾಗಸಮುದ್ರದ ಗುತ್ತಿದಾರ ಎನ್.ಬಿ.ಗೋವಿಂದಪ್ಪ 25 ಸಾವಿರ ರೂ. ದೇಣಿಗೆ ನೀಡವುದಾಗಿ ವಾಗ್ದಾನ ಮಾಡಿದರು.

ಹಾನಗಲ್ ಗ್ರಾಪಂ ಅಧ್ಯಕ್ಷ ಸೂರಯ್ಯ, ತಾಪಂ ಇಒ ಎಂ.ಆರ್.ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ನಾಸೀರ್, ಪಿಎಸ್‌ಐ ಪಾಂಡುರಂಗಪ್ಪ, ಪಶು ವೈದ್ಯಾಧಿಕಾರಿ ಡಾ.ರಂಗಪ್ಪ, ಟಿಎಚ್‌ಒ ಡಾ.ಮಧುಕುಮಾರ, ಪ್ರಾಚಾರ್ಯ ಗೋವಿಂದಪ್ಪ, ಪಟೇಲ್ ಜಿ.ಪಾಪನಾಯಕ, ಗುರುರಾಜಣ್ಣ, ಗೋವಿಂದಪ್ಪ, ಸತ್ಯನಾರಾಯಣ, ಪರಮೇಶ್ವರಪ್ಪ, ವಿ.ಮಾರನಾಯಕ, ಚಿನ್ನಪಾಲಯ್ಯ, ನಿಂಗಣ್ಣ, ಮುರುಳಿಧರ, ಬಡೋಬನಾಯಕ, ಟಿ.ಎಸ್.ಪಾಲಯ್ಯ, ವೆಂಕಟೇಶ್, ಜಿ.ಪಿ.ಸುರೇಶ್, ಸಿದ್ದಣ್ಣ, ಓಬಣ್ಣ, ಮಾರಣ್ಣ ಇತರರಿದ್ದರು.

ಶೋಭೆ: ಸಾಧಕರು, ಆದರ್ಶ ವ್ಯಕ್ತಿಗಳ ಜಯಂತಿ ಅದ್ದೂರಿ ಆಚರಣೆಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ. ಆದರೆ, ಮೆರವಣಿಗೆ ಸಂದರ್ಭ ಸ್ವಪ್ರತಿಷ್ಠೆ ಸಲ್ಲದು. ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಅಸಭ್ಯ ಹಾಡು, ಡ್ಯಾನ್ಸ್ ಇತರ ಚಟುವಟಿಕೆಗಳಿಗೆ ಸಂಘಟಕರೆ ಕಡಿವಾಣ ಹಾಕಬೇಕು. ಮಹನೀಯರ ಜಯಂತಿಗೆ ಶೋಭೆ ತರುವ ಕೆಲಸ ಆಗಬೇಕು.-ವಸಂತ ವಿ.ಅಸೋದೆ, ಸಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net