ಅದ್ದೂರಿ ಚನ್ನಕೇಶವಸ್ವಾಮಿ ತೆಪ್ಪೋತ್ಸವ

7blrp1
Published on

ಬೇಲೂರು: ಪಟ್ಟಣದ ವಿಷ್ಣುಸಮುದ್ರ ಕಲ್ಯಾಣಿಯಲ್ಲಿ ಶ್ರೀ ಚನ್ನಕೇಶವಸ್ವಾಮಿ ತೆಪ್ಪೋತ್ಸವ ಗುರುವಾರ ರಾತ್ರಿ ಅದ್ದೂರಿಯಾಗಿ ಜರುಗಿತು.


ವಿವಿಧ ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ತೆಪ್ಪದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ವಿಶೇಷವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ತೀರ್ಥಸ್ನಾನ, ಶೇಷತೀರ್ಥ ಪ್ರೋಕ್ಷಣೆ ನಡೆಸಿ ಪೂಜೆ ಸಲ್ಲಿಸಿ, ಕಲ್ಯಾಣಿಯ ಗೋಪುರ ಸುತ್ತ ತೆಪ್ಪವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ನಂತರದಲ್ಲಿ ಉತ್ಸವ ಮೂರ್ತಿಯನ್ನು ಕಲ್ಯಾಣಿ ಮಧ್ಯದಲ್ಲಿರುವ ಕಲ್ಲಿನ ಮಂಟಪದಲ್ಲಿ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಆರಂಭಿಸಲಾಯಿತು. ಜಮಾಯಿಸಿದ್ದ ಸಾವಿರಾರು ಭಕ್ತರು ಗೋವಿಂದ…ಗೋವಿಂದ…ಎಂದು ನಾಮ ಸ್ಮರಣೆ ಮಾಡುತ್ತ ಭಕ್ತಿಯಿಂದ ನಮಿಸಿದರು.


ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ವಿದ್ಯುಲತಾ, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಅರ್ಚಕರಾದ ಶ್ರೀನಿವಾಸಭಟ್, ನರಸಿಂಹ ಪ್ರಿಯ ಭಟ್, ಸೇವಾರ್ಥದಾರ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net