ಅತ್ಯಾಚಾರಿಗಳಿಗೆ ಕಠಿಣ ಸಜೆ ವಿಧಿಸಲು ಆಗ್ರಹ

Published on
ದಾವಣಗೆರೆ : ಸಾಮೂಹಿಕ ಅತ್ಯಾಚಾರ ಎಸಗಿ, ಉತ್ತರ ಪ್ರದೇಶದ ಹತ್ರಾಸ್‌ನ ಯುವತಿ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸಲು ಆಗ್ರಹಿಸಿ ಎಐಎಂಎಸ್‌ಎಸ್, ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಾಲ್ವರು ಆರೋಪಿಗಳು ಅತ್ಯಾಚಾರ ಎಸಗಿದ್ದಲ್ಲದೆ ಯುವತಿಯ ನಾಲಗೆ ಕತ್ತರಿಸಿ, ಬೆನ್ನುಮೂಳೆ ಮುರಿದು ಅಮಾನವೀಯವಾಗಿ ವರ್ತಿಸಿದ್ದಾರೆ. ಸೆ.14ರಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಯುವತಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ದೇಶದಲ್ಲಿನ ಮಹಿಳೆಯರ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿವೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ನಮ್ಮ ದೇಶದ ಮಹಿಳೆಯರು ಹಾಗೂ ಮಕ್ಕಳ ಘನತೆ ಕಾಪಾಡುವಲ್ಲಿ ಸೋತು ಹೋಗಿವೆ. ಲಾಭ ಮಾಡುವ ಕಾರ್ಪೊರೇಟ್ ಕುಳಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಅಶ್ಲೀಲತೆ ಮತ್ತು ಮಧ್ಯಪಾನ ಮುಂತಾದವುಗಳಿಗೆ ಸರ್ಕಾರಗಳು ಬೆಂಬಲಿಸುತ್ತಿವೆ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆ  ಎಂದು ಹೇಳಿದರು.
ಈ ಪ್ರಕರಣವನ್ನು ಫಾಸ್ಟ್ ಟ್ರಾೃಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು. ಅಶ್ಲೀಲತೆ, ಡ್ರಗ್ಸ್ ಮತ್ತು ಮದ್ಯವನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದರು.
ಎಐಎಂಎಸ್‌ಎಸ್ ಅಧ್ಯಕ್ಷೆ ಬಿ.ಆರ್.ಅಪರ್ಣಾ ಮಾತನಾಡಿ ಉತ್ತರ ಪ್ರದೇಶದ ಘಟನೆ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ. ಸರ್ಕಾರ ನೊಂದವರನ್ನು ರಚಿಸುವ ಬದಲು ಅಪರಾಧಿಗಳನ್ನು ರಕ್ಷಿಸುತ್ತಿದೆ.ಮೃತಳ ಶವವನ್ನು ಕುಟುಂಬದವರಿಗೆ ನೀಡದೆ ಪೊಲೀಸರೆ ಅಂತ್ಯಸಂಸ್ಕಾರ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಎಐಡಿವೈಓ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕ್ಕುವಾಡ, ಕಾರ್ಯದರ್ಶಿ ಕೆ.ಭಾರತಿ, ಎಐಡಿಎಸ್‌ಒ ಸಂಘಟನೆಯ ಜಂಟಿ ಕಾರ್ಯದರ್ಶಿಗಳಾದ ಕಾವ್ಯ. ಸೌಮ್ಯ, ಮಮತಾ, ಸುಮನ್, ಧನುಷ್, ನಿಸಾರ್ ಅಹ್ಮದ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net