ಅಡುಗೆ ಸಿಬ್ಬಂದಿಯ ಅಂಧಾದರ್ಬಾರ್

MLK BHETI 28 (1)
Published on

ಮೊಳಕಾಲ್ಮೂರು: ಪ್ರಾಚಾರ್ಯ ಮತ್ತು ವಾರ್ಡ್‌ನ್‌ರನ್ನು ಹೆದರಿಸಿ, ಬೆದರಿಸಿ ಶಾಲಾ ಬಿಸಿಯೂಟದ ಎಣ್ಣೆ, ಬೇಳೆ ಕಳ್ಳತನ ಮಾಡುವ ದಂಧೆಗಿಳಿದು ದರ್ಬಾರ್ ನಡೆಸುತ್ತಿರುವ ಹೊರಗುತ್ತಿಗೆ ಅಡುಗೆ ಸಿಬ್ಬಂದಿಯ ಆವಾಜ್ ಹಾಕಿರುವ ವಿಡಿಯೋ ನೋಡಿದ ಶಾಸಕ ಎನ್.ವೈ.ಗೋಪಾಲಕೃಷ್ಣ ಕೆಲಹೊತ್ತು ದಂಗಾದ ಪ್ರಸಂಗ ನಡೆಯಿತು.
ತಾಲೂಕಿನ ಕೆರೆಕೊಂಡಾಪುರದ ಸಮೀಪ ಇರುವ ಇಂದಿರಾ ಗಾಂಧಿ ಬಾಲಕ, ಬಾಲಕಿಯರ ವಸತಿ ಶಾಲೆ ಅಡುಗೆ ಸಿಬ್ಬಂದಿ ದರ್ಬಾರ್ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿದ ಶಾಸಕರು ಈ ಬಗ್ಗೆ ಸ್ವತಃ ತಾವೇ ಪರಿಶೀಲನೆ ನಡೆಸಿ ಖಂಡಕ್ ಸೂಚನೆ ನೀಡಿದ್ದಾರೆ.
ಶಾಲೆಯಲ್ಲಿ 238 ಮಕ್ಕಳಿವೆ ಅವರಿಗೆ ಗುಣಮಟ್ಟದ ಆಹಾರ ಕೊಡುವ ಜವಾಬ್ದಾರಿ ಮರೆತು ಪ್ರಾಚಾರ್ಯ ಮತ್ತು ವಾರ್ಡ್‌ನ್ ಅವರ ಸೌಜನ್ಯ ವರ್ತನೆ ದುರುಪಯೋಗ ಪಡಿಸಿಕೊಂಡು ಅವರ ಮೇಲೆ ದಬ್ಬಾಳಿಕೆ ಮಾತುಗಳು ಮೊಬೈಲ್‌ನಲ್ಲಿ ಸೆರೆಯಾಗಿರುವ ವಿಡಿಯೋ ನೋಡಿ ಗಾಬರಿಯಾಗಿದ್ದೇನೆ. ಇಲ್ಲಿನ ವ್ಯವಸ್ಥೆ ನೋಡಿದರೆ ಕರ್ಮಕಾಂಡ ತುಂಬಿ ತುಳುಕುತ್ತಿದೆ. ನಾಚಿಕೆಯಾಗಲ್ವಾ? ನಿಮಗೆ ಮಕ್ಕಳ ಶಾಪ ತಟ್ಟದೇ ಇರಲ್ಲ ಎಂದು ಶಾಸಕರು ಅಡುಗೆ ಸಿಬ್ಬಂದಿಯನ್ನ ತರಾಟೆಗೆ ತಗೆದುಕೊಂಡರು.
ಪ್ರಿನ್ಸಿಪಾಲ್ ಹುದ್ದೆ ಅಂದರೆ ಮನೆ ಯಜಮಾನ ಇದ್ದಂತೆ. ಮಕ್ಕಳ ವಸತಿ ಸೌಲಭ್ಯ ಮತ್ತು ಶಿಕ್ಷಣದ ವಿಷಯದಲ್ಲಿ ಜವಬ್ದಾರಿ ಇರಬೇಕು. ಆದರೆ ನಿಮ್ಮಲ್ಲಿ ಅಂತಹ ಬದ್ಧತೆ ಕಾಣುತ್ತಿಲ್ಲ. ಎಲ್ಲದಕ್ಕೂ ಸಣ್ಣ ಮಕ್ಕಳಂತೆ ಉತ್ತರ ಕೊಡುತ್ತೀಯ. ನಿನ್ನ ಅಸಹಾಯಕತೆ ನೋಡಿಕೊಂಡು ಅವರೆಲ್ಲ ಬಲಾಢ್ಯರಾಗಿದ್ದಾರೆ. ಈ ರೀತಿ ವರ್ತಿಸುತ್ತಾರೆ ಎಂದು ಮೇಲಾಧಿಕಾರಿಗಳ ಗಮನಕ್ಕೂ ತರದೆ ಮಕ್ಕಳ ಭವಿಷ್ಯ ಹಾಳು ಮಾಡಲು ಬಂದಿದ್ದೀರಾ. ನಿಮ್ಮ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇವರನ್ನ ಬೇರೆ ಕಡೆ ವಾರ್ಗವಣೆ ಮಾಡುವುದೇ ಸೂಕ್ತ ಎಂದು ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗೆ ಸೂಚನೆ ನೀಡಿದರು.
ಅಸಭ್ಯ ವರ್ತನೆಯಿಂದ ನಡೆದುಕೊಳ್ಳುತ್ತಿರುವ ಇಬ್ಬರು ಅಡುಗೆ ಸಿಬ್ಬಂದಿಯನ್ನ ಅಮಾನತು ಮಾಡಿ ಬೇರೆಯವರನ್ನ ನೇಮಕ ಮಾಡಿಕೊಳ್ಳಲು ಸೂಕ್ತ ಕ್ರಮವಹಿಸಲಾಗುವುದು. ಆಗಿರುವ ತಪ್ಪನ್ನ ಸರಿಪಡಿಸಿಕೊಂಡು ಮಕ್ಕಳಿಗೆ ಉತ್ತಮ ಸೇವೆ ಒದಗಿಸಬೇಕು ಹಾಗೂ ಫುಡ್ ಸಪ್ಲೈ ಮಾಡಲು ವಿಳಂಭ ಧೋರಣೆ ಅನುಸರಿಸುತ್ತಿರುವ ಏಜೆನ್ಸಿಯನ್ನ ಕಪ್ಪು ಪಟ್ಟಿಗೆ ಸೇರಿಸುವಂತೆ ಶಿಪಾರಸು ಮಾಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ಹೆಬ್ಬಾಳ್ ಕಡಕ್ ಎಚ್ಚರಿಕೆ ನೀಡಿದರು.
ಇಲ್ಲಿ ಕೆಲಸ ಮಾಡುವ ಸ್ಥಳೀಯರಿಗೆ ನಮ್ಮೂರಿನ ಮಕ್ಕಳೆಂಬ ಅಭಿಮಾನ ಇಲ್ಲ. ಬಾಲ್ಯದಲ್ಲೇ ಅವರ ಶಿಕ್ಷಣದ ಭವಿಷ್ಯವನ್ನ ಚಿವುಟಿ ಹಾಕುವ ಪ್ರವೃತ್ತಿ ಒಳ್ಳೆಯದಲ್ಲ. ಇಲ್ಲಿನ ನಡೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ಅಧಿಕಾರಿಗಳೂ ಸಹಿತ ಇಂತಹ ಅವ್ಯವಸ್ಥೆಗಳ ಬಗ್ಗೆ ಆಗಾಗ ಗಮನಹರಿಸಬೇಕು. ಇಷ್ಟು ದೊಡ್ಡ ಮಟ್ಟಕ್ಕೆ ಹೋಗುವ ತನಕ ಬಿಡಬಾರದು. ಅಡುಗೆ ಸಿಬ್ಬಂದಿ ದರ್ಬಾರ್ ವರ್ಷದಿಂದ ನಡೆಯುತ್ತಿದೆ ಎಂದು ನನಗೆ ಇಲ್ಲಿನ ಶಿಕ್ಷಕರು ವಿಡಿಯೋ ಕಳಿಸಿರುವ ಬಗ್ಗೆ ನೋಡಿ ಸಹಿಸಲಾಗದೆ ಬರಬೇಕಾಯ್ತು. ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಲೈಟ್‌ಗಳು ಜೋತಾಡುತ್ತಿವೆ. ತಹಸೀಲ್ದಾರ್ ರೂಪಾ ಅವರು ಬಂದು ಪರಿಶೀಲನೆ ನಡೆಸಿದರೂ ಹಾರಿಕೆ ಉತ್ತರ ನೀಡಿರುವ ವರ್ತನೆ ಸರಿಯೇ ಎಂದು ಪ್ರಾಂಶುಪಾಲ ನಾಗೇಂದ್ರಪ್ಪ ಅವರನ್ನ ಪ್ರಶ್ನಿಸಿದ ಅವರು, ಮುಂದೆ ಇಂತಹ ತಪ್ಪುಗಳು ಮರುಕಳಿಸಬಾರದು. ಕೊನೆ ಅವಕಾಶ ಇದು ಎಂದು ಕಡಕ್ ಸೂಚನೆ ಕೊಟ್ಟರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನಿರೀಕ್ಷಕ ಶಿವಕುಮಾರ್, ತಾಲೂಕು ಅಧಿಕಾರಿ ಡಿ.ಚಿದಾನಂದಪ್ಪ ಶ್ರೀಕಾಂತ್, ಭರತ್‌ಕುಮಾರ, ಡಿ,ಫೆನ್ನಯ್ಯ ಹಾಗೂ ಊರಿನ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net