ಅಡುಗೆ ಸಹಾಯಕಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

Published on

ಚಾಮರಾಜನಗರ: ಅಡುಗೆ ಸಹಾಯಕಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶಾಲೆಗೆ ಗ್ರಾಮಸ್ಥರು ಬೀಗ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಹೆಬ್ಬಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಜಮಾಯಿಸಿದ ಗ್ರಾಮಸ್ಥರು, ಶಾಲಾ ಶಿಕ್ಷಕರು ಮತ್ತು ಮಕ್ಕಳನ್ನು ಹೊರಗೆ ಕಳುಹಿಸಿ ಗೇಟ್‌ಗೆ ಬೀಗ ಹಾಕಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಶಾಲೆಯ ಅಡುಗೆ ಸಹಾಯಕಿ ಪುಷ್ಪಾ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಮಕ್ಕಳು ಮತ್ತು ಶಿಕ್ಷಕರು ಸೇರಿದಂತೆ ಪಾಲಕರ ಜತೆಯಲ್ಲಿ ಸರಿಯಾಗಿ ವರ್ತಿಸುವುದಿಲ್ಲ. ವಾಮಾಚಾರ ಮಾಡಿದ ವಿಭೂತಿಯನ್ನು ಅಡುಗೆಯಲ್ಲಿ ಹಾಕುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಗುರುಲಿಂಗಯ್ಯ ಶಾಲೆಗೆ ಆಗಮಿಸಿ ಬೀಗ ತೆರವುಗೊಳಿಸಿ ಮಕ್ಕಳನ್ನು ಕೊಠಡಿಗಳಿಗೆ ಕಳುಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ: ಪ್ರತಿಭಟನೆಯ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಶಿಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ಶಾಲಾ ಆವರಣದಲ್ಲಿ ಸಭೆ ನಡೆಸಿದರು. ಈ ವೇಳೆ ಮಾತನಾಡಿ, ಅಡುಗೆ ಸಹಾಯಕಿಯನ್ನು ನೇಮಿಸುವ ಮತ್ತು ತೆಗೆದುಹಾಕುವ ಅಧಿಕಾರ ಇಲಾಖೆಗೆ ಇಲ್ಲ. ನೇಮಕಾತಿ ಸಮಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಮುಖ್ಯಶಿಕ್ಷಕರು, ಗ್ರಾಪಂ ಅಧ್ಯಕ್ಷರು, ಪಿಡಿಒ ಮತ್ತು ಗ್ರಾಮಸ್ಥರು ಸಭೆ ಸೇರಿ ನಿರ್ಧಾರ ಮಾಡಬೇಕಾಗುತ್ತದೆ ಎಂದರು.

ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ ಎಂದು ಮುಖ್ಯ ಶಿಕ್ಷಕಿ ಅವರನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ಗ್ರಾಪಂ ಅಧ್ಯಕ್ಷೆ ಪದ್ಮಾ, ಸದಸ್ಯರಾದ ಸಾದಿಕ್, ಮಧು, ಪಿಡಿಒ ರಂಜಿತಾ, ಬಸವಣ್ಣ, ಸಿ.ಆರ್.ಪಿ ಬಸವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ರಾಮಸ್ವಾಮಿ, ನಯೀಮ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net