

ಶೃಂಗೇರಿ: ವೇದ, ಉಪನಿಷತ್ತು ಹಾಗೂ ನೀತಿ ಸಂಹಿತೆಗಳಲ್ಲಿ ಅಡಕೆ ಕುರಿತು ಉಲ್ಲೇಖವಿದ್ದು, ಸಾವಿರಾರು ರುದ್ರಾಕ್ಷಿಯನ್ನು ಹೊಂದಿರುವ ಎತ್ತರದ ಸನ್ಯಾಸಿ ಎಂದು ಜನಪದದಲ್ಲಿ ಅಡಕೆ ಕುರಿತು ಗಾದೆಯಿದೆ. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಹಾಸುಹೊಕ್ಕಾದ ಅಡಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶಿವಮೊಗ್ಗ ನವಿಲೆ ಅಡಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ನಾಗರಾಜಪ್ಪ ಅಡಿವಪ್ಪರ್ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿನ ಐಕ್ಯೂಎಸಿ ಅರ್ಥಶಾಸ ಮತ್ತು ಕಲಾ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ಅಡಕೆ ಸಮಸ್ಯೆಗಳು ಮತ್ತು ನಿರೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಧನ್ವಂತರಿ ನಿಘಂಟುಗಳಲ್ಲಿ ಐದು ದ್ರವ್ಯಗಳಲ್ಲಿ ಅಡಕೆ ಅತ್ಯಂತ ಶ್ರೇಷ್ಠವಾಗಿದೆ. ಪ್ರಸ್ತುತ ಅಡಕೆ ಬೆಳೆಗಳಿಗೆ ತಗಲಿದ ರೋಗದಿಂದ ಮಲೆನಾಡಿನ ರೈತರು ಹೈರಾಣವಾಗಿದ್ದಾರೆ. ಆದರೆ ಕೃಷಿಕರು ಅಡಕೆ ಜತೆಗೆ ಬಹು ಬೆಳೆಗಳನ್ನು ಬೆಳೆಸುವತ್ತ ಹೆಚ್ಚಿನ ಗಮನ ನೀಡಬೇಕು. ಅಡಕೆ ಜತೆ ಬಾಳೆ, ಕಾಳುಮೆಣಸು, ಏಲಕ್ಕಿ ಮುಂತಾದುವುಗಳನ್ನು ಬೆಳೆಸಿ ಅರ್ಥಿಕ ಸಬಲತೆ ಪಡೆಯಲು ಸಾಧ್ಯ ಎಂದರು.
ಮೈದಾನ್ ತಳಿ, ತೀರ್ಥಹಳ್ಳಿ ಲೋಕಲ್, ಸ್ವರ್ಣ ಮಂಗಳ, ಮೋಹಿತ್ ನಗರ್ ಹೀಗೆ ಅಡಕೆಗಳ ತಳಿಗಳನ್ನು ಬೆಳೆಸಿ ಉತ್ತಮ ಇಳುವರಿ ಪಡೆಯ ಬಹುದು. ಕಾಲ ಕಾಲಕ್ಕೆ ಅಡಕೆ ಬೆಳೆಗೆ ಬೇಕಾದ ಪೋಷಕಾಂಶ ನೀಡುವದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಬೆಳೆಗಳಿಗೆ ಬಂದ ರೋಗದಿಂದ ರೈತರು ಹತಾಶರಾಗದೆ ಇರುವ ಅಡಕೆ ತೋಟಗಳನ್ನು ಉತ್ತಮವಾಗಿ ಹೆಚ್ಚಿನ ನಿರ್ವಹಣೆ ಮಾಡಬೇಕು ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ಅಡಕೆ ಮಲೆನಾಡಿನ ಜನರ ಜೀವನಾಡಿ. ಅಧಿಕವಾದ ತೇವಾಂಶದಿಂದ ಎಲೆ ಚುಕ್ಕಿರೋಗ ಬಂದು ಬೆಳೆ ನಾಶವಾಗುತ್ತಿದೆ. ರೈತರು ಸೂಕ್ತ ಸಮಯದಲ್ಲಿ ಅಡಕೆ ತೋಟಗಳಿಗೆ ಪೋಷಕಾಂಶಗಳನ್ನು ನೀಡಬೇಕು ಎಂದು ತಿಳಿಸಿದರು.
ಇಲ್ಲಿರುವ ವಿದ್ಯಾರ್ಥಿಗಳು ಕೃಷಿ ಕುಟುಂಬದ ಹಿನ್ನಲೆ ಹೊಂದಿದ್ದು ವಾಣಿಜ್ಯ ಬೆಳೆಗಳ ಉಳಿವಿಗೆ ಮುನ್ನಡಿ ಬರೆಯಬೇಕು. ನೂರು ಮರಗಳನ್ನು ಆಯ್ಕೆ ಮಾಡಿ ತಜ್ಞರ ಶಿಾರಸ್ಸು ಪಡೆದು ಅದರ ನಿರ್ವಹಣೆಗೆ ಯುವಜನತೆ ಗಮನ ಹರಿಸುವ ಅನಿವಾರ್ಯತೆ ಇದೆ. ಪ್ರಸ್ತುತ ಅಡಕೆ ತೋಟಗಳ ವಿಸ್ತರಣೆ ಹೆಚ್ಚಾಗುತ್ತಿದೆ. ಮಲೆನಾಡಿಗೆ ಮಾತ್ರ ಸೀಮಿತವಾದ ಸಾಂಪ್ರಾದಾಯಿಕ ಬೆಳೆ ಬಯಲಿ ಸೀಮೆ ಆವರಿಸಿಕೊಂಡಿದೆ. ಆದರೆ ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಮಲೆನಾಡಿನ ಕೃಷಿಕರ ಜತೆ ಯುವಜನತೆ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಮ್ಯಾಮ್ಕೋಸ್ ನಿರ್ದೇಶಕ ಸುರೇಶ್ಚಂದ್ರ ಉದ್ಘಾಟಿಸಿದರು. ತಾಲೂಕು ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾರಾಯಣ ಸ್ವಾಮಿ, ಪ್ರಾಧ್ಯಾಪಕರಾದ ನಾಗಭೂಷಣ್. ಬಿ.ಆರ್.ವಿದ್ಯಾಧರ್, ಎಂ.ವಿ.ಪ್ರಶಾಂತ್, ಎನ್.ಎಚ್.ಲಕ್ಷ್ಮಿನಾರಾಯಣ್, ಡಾ.ಕೆ.ಪಿ.ಪ್ರಕಾಶ್, ಕಲಾ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.