ಅಜ್ಜಂಪುರ ಪಪಂ ಚುನಾವಣೆ ತಯಾರಿ ಜೋರು

30 TKE STORY 1 (AJP PATTANA PANCHAYATH)
ಅಜ್ಜಂಪುರ ಪಟ್ಟಣ ಪಂಚಾಯಿತಿ ಕಚೇರಿ.
Published on

ತರೀಕೆರೆ: ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಅಜ್ಜಂಪುರ ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿದ ಬಳಿಕ 2020ರ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿ ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬಿರುಸಿನ ಚಟುವಟಿಕೆ ಆರಂಭಿಸಿವೆ. ನಾಲ್ಕು ವರ್ಷಗಳಿಂದಲೂ ಆಡಳಿತಾಧಿಕಾರಿಗಳ ಕೈಯಲ್ಲೇ ಉಳಿದಿದ್ದ ಅಜ್ಜಂಪುರ ಪಪಂ ಅಧಿಕಾರ ಆಡಳಿತ ಮಂಡಳಿ ಕೈಸೇರುವ ಕಾಲ ಸನ್ನಿಹಿತವಾಗಿದೆ.

2021ನೇ ಸಾಲಿನ ಮೇ ಅಂತ್ಯದವರೆಗೂ ಹಿಂದಿನ ಗ್ರಾಪಂ ಆಡಳಿತವೇ ಅಧಿಕಾರ ನಡೆಸಿ ಅವಧಿ ಮುಗಿಸಿದ್ದ ಪಟ್ಟಣ ಪಂಚಾಯಿತಿ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದ್ದು, ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಣೆ ಪ್ರಕ್ರಿಯೆ ಜತೆ ಎದುರಾಗಿದ್ದ ಎಲ್ಲ ಅಡೆತಡೆ ಮೀರಿ ಆ.17ಕ್ಕೆ ಮುಹೂರ್ತ ನಿಗದಿಗೊಳಿಸಿದೆ.

ಕುರುಬರ ಪ್ರಾಬಲ್ಯವಿರುವ ಅಜ್ಜಂಪುರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಬಲಿಷ್ಠ ಎಂದು ಅಂದಾಜಿಸಲಾಗುತ್ತಿದೆಯಾದರೂ, ಕಳೆದ ಲೋಕಸಭೆ ಚುನಾವಣೆಯಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿರುವ ಬಿಜೆಪಿ-ಜೆಡಿಎಸ್ 11 ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿಯುವ ಕೈ ಕಲಿಗಳನ್ನು ಕಟ್ಟಿಹಾಕುವ ಮೂಲಕ ಹೆಚ್ಚು ಸ್ಥಾನ ಗಿಟ್ಟಿಸಿಕೊಳ್ಳುವ ತವಕದಲ್ಲಿವೆ.

ಅಜ್ಜಂಪುರ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಪಪಂಗೆ ಅಧಿಕೃತವಾಗಿ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯಲು ಕಾಂಗ್ರೆಸ್ ತಂತ್ರ ಹೆಣೆದು ಒಂಟಿ ಹೋರಾಟ ನಡೆಸಿದರೆ, ಬಿಜೆಪಿ ತನ್ನ ದೋಸ್ತಿ ಪಕ್ಷ ಜೆಡಿಎಸ್ ಜತೆ ಸೇರಿ ಚೆಕ್‌ಮೆಟ್ ಇಡಲು ಪ್ರತಿತಂತ್ರ ಅನುಸರಿಸುತ್ತಿದೆ.

ಚುನಾವಣೆಗೆ ಅಧಿಸೂಚನೆ ಹೊರಡಿಸಿರುವ ಬಳಿಕವೂ ಕಾಂಗ್ರೆಸ್ 11 ವಾರ್ಡ್‌ಗಳ ತನ್ನ ಅಭ್ಯರ್ಥಿಗಳ ಪಟ್ಟಿ ಗುಪ್ತವಾಗಿರಿಸಿ ಕಾದು ನೋಡುವ ತಂತ್ರ ಅನುಸರಿಸಿದರೆ, ಬಿಜೆಪಿ 1, 2, 3, 5, 6, 9 ಮತ್ತು 11ನೇ ವಾರ್ಡ್‌ಗೆ ಈಗಾಗಲೇ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿ, ಉಳಿದ ವಾರ್ಡ್‌ಗಳಲ್ಲಿ ಸಮರ್ಥ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.

ಅಜ್ಜಂಪುರ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಈ ಹಿಂದೆ ಗ್ರಾಪಂ ಚುನಾವಣೆ ಸೋತ ಅನುಕಂಪ, ಜನಸೇವೆ, ವರ್ಚಸ್ಸು ಇತರ ಅಸ ಪ್ರಯೋಗ ನಡೆಯಲಿದೆ. ಜಯಭೇರಿ ಬಾರಿಸಲು ತವಕದಲ್ಲಿರುವ ಅಭ್ಯರ್ಥಿಗಳಿಗೆ ಗೆಲುವು ಸುಲಭದ ತುತ್ತಂತೂ ಆಗಿಲ್ಲ. ಈ ನಡುವೆ ಜಿದ್ದಾಜಿದ್ದಿಗೆ ಬಿದ್ದಿರುವ ಎರಡೂ ಪ್ರಮುಖ ಪಕ್ಷಗಳ ಸಮಬಲ ಸಾಧಿಸಿದರೂ ಅಚ್ಚರಿ ಪಡಬೇಕಿಲ್ಲ. ಇದೆಲ್ಲದರ ಹೊರತಾಗಿ 11 ಸ್ಥಾನಕ್ಕೆ ಸ್ಪರ್ಧಿಸುವವರ ಹಣೆಬರಹ ಬರೆಯಲು ಕ್ರಮವಾಗಿ ಬಾಹುಳ್ಯ ಹೊಂದಿರುವ ಕುರುಬ, ಲಿಂಗಾಯತ, ಮುಸ್ಲಿಂ, ಭಾವಸಾರ ಕ್ಷತ್ರೀಯ, ದೇವಾಂಗ, ಉಪವೀರ, ಮಡಿವಾಳ ಮತ್ತು ಎಸ್ಸಿ, ಎಸ್ಟಿ ಸಮುದಾಯದ ಮತದಾರರ ಪಾತ್ರ ನಿರ್ಣಾಯಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net