

ತರೀಕೆರೆ: ಅಜ್ಜಂಪುರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಮೊಟ್ಟ ಮೊದಲ ಅಧ್ಯಕ್ಷರಾಗಿ 4ನೇ ವಾರ್ಡ್‌ನ ಬಿಜೆಪಿ ಸದಸ್ಯ ಎ.ಜಿ.ರೇವಣ್ಣ, ಉಪಾಧ್ಯಕ್ಷೆಯಾಗಿ 1ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಡಿ.ಕವಿತಾ ಅವಿರೋಧ ಆಯ್ಕೆಯಾದರು.
ಪಪಂನ 11 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಲಿತಾಂಶ ಹೊರಬಿದ್ದ 54 (ಆಗಸ್ಟ್ 20) ದಿನಗಳ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎ.ಜಿ.ರೇವಣ್ಣ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಕವಿತಾ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ಹೊರತಾಗಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಬಿ.ವಿ.ವಿನಾಯಕ ಸಾಗರ್ ಅಜ್ಜಂಪುರ ಪಪಂಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕಟಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ನೀಡುವುದು ಬಿಜೆಪಿ ಸಿದ್ಧಾಂತದ ಜತೆ ವಿಶೇಷತೆ ಸಹ ಆಗಿದೆ. ಅಜ್ಜಂಪುರ ತಾಲೂಕು ಕೇಂದ್ರವಾಗಿ ಮಾರ್ಪಟ್ಟು ಪಪಂ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಈ ಗೆಲುವು ಮುಂಬರುವ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಎಂದರು.
ಅಜ್ಜಂಪುರ-ಹೊಸದುರ್ಗ ಮಾರ್ಗಮಧ್ಯದ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಆತ್ಮನಿರ್ಭರ್ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದ್ದು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಅಜ್ಜಂಪುರ ಪಪಂಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸವಿತಾ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಮಾಜಿ ಉಪಾಧ್ಯಕ್ಷರಾದ ಕೆ.ಆರ್.ಆನಂದಪ್ಪ, ಶಂಭೈನೂರು ಆನಂದಪ್ಪ, ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ಪಪಂ ಸದಸ್ಯ ಬಿ.ರಂಗಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್, ಅಜ್ಜಂಪುರ ಬಿಜೆಪಿ ನಗರ ಘಟಕ ಅಧ್ಯಕ್ಷ ಸಿ.ಎಸ್.ಸಿದ್ದೇಗೌಡ ಮತ್ತಿತರರಿದ್ದರು.