ಅಚ್ಚುಕಟ್ಟು ಪ್ರದೇಶದ ಬೆಳೆಗಳು ನಾಶ

HUN-NOV-2-1(K M VADI NALE)
ಕಟ್ಟೆಮಳಲವಾಡಿ ಅಣೆಕಟ್ಟೆಯ ನಾಲೆಯಲ್ಲಿ ಹೂಳು ಮತ್ತು ಗಿಡಗಂಟಿಗಳು ಬೆಳೆದಿರುವುದು.
Published on


ಕ್ರಮಕ್ಕೆ ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಆಗ್ರಹ


ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ನಾಲೆಯಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯದ ಕಾರಣ ನಾಲೆಯ ವ್ಯಾಪ್ತಿಯ 1500ಕ್ಕೂ ಹೆಚ್ಚು ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳು ನಾಶವಾಗುತ್ತಿದ್ದು, ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಅಧಿಕಾರಿಗಳು ಶೀಘ್ರ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಆಗ್ರಹಿಸಿದ್ದಾರೆ.

10 ಕಿ.ಮೀ. ಉದ್ದದ ನಾಲೆಯ ವ್ಯಾಪ್ತಿಯಲ್ಲಿ ಕಿರಿಸೊಡ್ಲು, ಅಗ್ರಹಾರ, ಗಾವಡಗೆರೆ, ವಡಕೆಕಟ್ಟೆ, ತೊಂಡಾಳು, ಕಟ್ಟೆಮಳಲವಾಡಿ ಕೊಪ್ಪಲು, ರಾಮಪಟ್ಟಣ, ಮರದೂರು ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು 1500ಕ್ಕೂ ಹೆಚ್ಚು ಅಚ್ಚುಕಟ್ಟು ಪ್ರದೇಶವಿದ್ದು, ನಾಲೆಯ ತುಂಬೆಲ್ಲ ಹೂಳು ಮತ್ತು ಗಿಡಗಂಟಿಗಳು ಬೆಳೆದಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಕಳೆದ 10 ದಿನಗಳಿಂದ ನಾಲೆಯ ಮೂಲಕ ನೀರನ್ನು ಹಾಯಿಸಿಲ್ಲ. ಈ ಭಾಗದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಗದ್ದೆಗಳಿಗೆ ನೀರು ಹಾಯಿಸದೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟ್ಟೆಮಳಲವಾಡಿ ಅಣೆಕಟ್ಟೆಗೆ 700 ವರ್ಷಗಳ ಇತಿಹಾಸವಿದ್ದು, ಮೈಸೂರು ಸಂಸ್ಥಾನದ ಅರಸರು ನಿರ್ಮಿಸಿದ್ದಾರೆ. ಈ ಅಣೆಕಟ್ಟೆಗೆ ಮತ್ತೊಂದು ನಾಲೆ ನಿರ್ಮಿಸಬೇಕು. ನಾಲೆಯ ಸಮಗ್ರ ಅಭಿವೃದ್ಧಿ ಕಾರ್ಯವಾಗಬೇಕೆಂದು ಫೌಂಡೇಷನ್ ನೇತೃತ್ವದಲ್ಲಿ ರೈತರೊಂದಿಗೆ ಸತತ ಹೋರಾಟ ನಡೆಸಲಾಗಿದೆ. ಇದೀಗ ರೈತರ ಬೆಳೆ ಹಾಳಾಗುತ್ತಿದ್ದು, ನಿಗಮದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸದಿದ್ದರೆ ರೈತರೊಂದಿಗೆ ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net