

ಪ್ರಕರಣ ಎ3 ಆರೋಪಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾವಮೈದ ಮಲ್ಲಿಕಾರ್ಜುನ ಸ್ವಾಮಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ನಗರ ಲೋಕಾಯುಕ್ತ ಕಚೇರಿಗೆ ತೆರಳಿ ಎಸ್ಪಿ ಉದೇಶ್ ಅವರನ್ನು ಭೇಟಿ ಮಾಡಿದ್ದು, ಇವರಿಬ್ಬರ ಭೇಟಿ ಅಚ್ಚರಿಗೆ ಕಾರಣವಾಗಿದೆ.
ಲೋಕಾಯುಕ್ತ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಮುಡಾದ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರ ವಿಚಾರಣೆ ನಡೆಸಲಾಗಿತ್ತು. ನಟೇಶ್ ಅವರು ವಿಚಾರ ಮುಗಿಸಿ ಹೊರ ಬಂದ ಅರ್ಧ ಗಂಟೆ ಬಳಿಕ ಮಲ್ಲಿಕಾರ್ಜುನಸ್ವಾಮಿ ಅವರು ಲೋಕಾಯುಕ್ತ ಎಸ್ಪಿ ಉದೇಶ್ ಅವರನ್ನು ಭೇಟಿ ಮಾಡಿದ್ದಾರೆ. ವೇಳೆ ಕೈಯ್ಯಲ್ಲಿ ಅನೇಕ ಪತ್ರ ಹಿಡಿದುಕೊಂಡು ಬಂದಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಲ್ಲಿಕಾರ್ಜುನಸ್ವಾಮಿ ರಾತ್ರಿ ಹೊತ್ತಿನಲ್ಲಿ ತನಿಖಾಧಿಕಾರಿಯನ್ನು ಭೇಟಿ ಮಾಡುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ಉದ್ಭವಾಗಿದೆ. ನಟೇಶ್ ಅವರ ವಿಚಾರಣೆ ಮುಗಿದ ಕೂಡಲೇ ವಿಚಾರಣಾಧಿಕಾರಿಯನ್ನು ಮತ್ತೊಬ್ಬ ಆರೋಪಿ ಮಲ್ಲಿಕಾರ್ಜುನಸ್ವಾಮಿ ಭೇಟಿ ಮಾಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.