

ಮಡಿಕೇರಿ: ತಿಗಳ ಸಮಾಜದ ಮೂಲಪುರುಷ ಶ್ರೀ ಅಗ್ನಿಬನ್ನಿರಾಯ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಗ್ನಿ ಬನ್ನಿರಾಯರಂತಹ ಮಹಾನ್ ಚೇತನಗಳ ಜೀವನಾದರ್ಶಗಳು ಮನುಕುಲದ ಹಾದಿಗೆ ಬೆಳಕಾಗಿದೆ ಎಂದು ನುಡಿದರು.
ಬೆಂಗಳೂರಿನ ಲಾಲ್‌ಬಾಗ್ ನಿರ್ಮಾಣಕ್ಕೆ ತಿಗಳ ಸಮಾಜ ಮೂಲ ಕಾರಣಕರ್ತರಾಗಿದ್ದಾರೆ. ತಿಗಳ ಸಮಾಜವು ಬೆಂಗಳೂರು, ತುಮಕೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪುರಾಣ, ಐತಿಹ್ಯಗಳಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಅವರ ಬಗ್ಗೆ ಉಲ್ಲೇಖವಿದ್ದು, ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಹಲವು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಪಿ.ಕವಿತಾ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿವಿಧ ಜಯಂತಿಗಳನ್ನು ಆಚರಿಸುತ್ತಿದ್ದು, ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.
ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗಲು ಸರ್ಕಾರ ವಿದ್ಯಾರ್ಥಿಗಳಿಗೆ ಜಿಲ್ಲೆಗೆ ಸುಮಾರು 25 ಲಕ್ಷ ರೂ. ವೆಚ್ಚದ ಪುಸ್ತಕವನ್ನು ಒದಗಿಸಿದೆ. ಈ ಪುಸ್ತಕಗಳನ್ನು ಜಿಲ್ಲೆಯ 21 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ತಲಾ 170 ಪುಸ್ತಕ ಪೂರೈಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ಸೌಲಭ್ಯ ಪಡೆದು, ಉನ್ನತ ವ್ಯಾಸಂಗ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು.
ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಎಚ್.ಜಿ.ಕುಮಾರ್ ಮಾತನಾಡಿ, ಅಗ್ನಿ ಬನ್ನಿರಾಯ ಸ್ವಾಮಿ ಇವರೊಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಆಚರಿಸಿಕೊಂಡು ಬಂದಿರುವ ಕರಗ ಉತ್ಸವಕ್ಕೆ ತಿಗಳ ಸಮಾಜದವರ ಕೊಡುಗೆ ಅಪಾರ ಎಂದು ತಿಳಿಸಿದರು.
ಬ್ಲಾಸಂ ಶಾಲೆಯ ಶಿಕ್ಷಕಿ ಮಂಗಳಗೌರಿ ಮಾತನಾಡಿ, ಅಗ್ನಿಬನ್ನಿರಾಯ ಸೇರಿದಂತೆ ಮಹಾನ್ ಪುರುಷರು ಮತ್ತು ಆದರ್ಶ ಮಹಿಳೆಯರನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ, ಕಲಾವಿದ ಈ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಉಪಸ್ಥಿತರಿದ್ದರು.