

ಬನ್ನೂರು: ಮೈಸೂರು-ಮಳವಳ್ಳಿ ಮುಖ್ಯರಸ್ತೆಯ ಒಳಚರಂಡಿ ಕಾಮಗಾರಿ ವೇಳೆ ಅಗೆದ ರಸ್ತೆಯನ್ನು ಕೂಡಲೇ ಡಾಂಬರೀಕರಣಗೊಳಿಸಿ ಆಗುತ್ತಿರುವ ಅನಾಹುತಗಳಿಗೆ ತಡೆಯೊಡ್ಡದಿದ್ದರೆ ಲೋಕೋಪಯೋಗಿ ಇಲಾಖೆ ಹಾಗೂ ಒಳಚರಂಡಿ ಇಲಾಖೆಯೇ ಅನಾಹುತಗಳಿಗೆ ಕಾರಣವೆಂದು ಆರೋಪಿಸಿ ರಸ್ತೆ ಸರಿಪಡಿಸುವವರೆಗೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ನಾರಾಯಣ್ ಎಚ್ಚರಿಸಿದರು.
ಪಟ್ಟಣದ ಅತಿಥಿಗೃಹದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಈ ಬಾರಿ ಮುಂಗಾರು ಕೈಕೊಟ್ಟಿದ್ದು ಕೆಆರ್‌ಎಸ್ ಅಣೆಕಟ್ಟೆಯಲ್ಲಿಯೇ ನೀರಿಲ್ಲದೆ ರೈತರು ಕಂಗೆಟ್ಟಿದ್ದಾರೆ. ರೈತಾಪಿವರ್ಗಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು. ರೈತರಿಗೆ ಅನುಕೂಲವಾಗುವಂತೆ ಎಲ್ಲ ಸಂದರ್ಭದಲ್ಲೂ ಬೆಳೆಗಳ ಖರೀದಿ ಕೇಂದ್ರವನ್ನು ಆರಂಭಿಸಿ ರೈತರಿಂದ ಬೆಳೆ ಖರೀದಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು, ಪಹಣಿಗಾಗಿ ರೈತರು ಕಚೇರಿಗಳನ್ನು ಅಲೆಯುತ್ತಿದ್ದರೂ ಅವರ ಸಮಸ್ಯೆಗಳು ನೀಗುತ್ತಿಲ್ಲ. ಅಧಿಕಾರಿಗಳ ಮಟ್ಟದಲ್ಲಿಯೇ ಪಹಣಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅನೇಕ ಪಶುಕೇಂದ್ರಗಳಿದ್ದರೂ ಅಲ್ಲಿಗೆ ನುರಿತ ವೈದ್ಯಾಧಿಕಾರಿಗಳಿಲ್ಲದೆ ರೈತರು ಪಶುಗಳ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಕೂಡಲೇ ಪಶು ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಬನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 1ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಆದರೆ ಮುಂಗಾರು ಕೈಕೊಟ್ಟಿರುವುದರಿಂದ ರೈತರು ಬಿತ್ತನೆ ಕಾರ್ಯ ಮಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನೀರಾವರಿ ತಜ್ಞರು ಹಾಗೂ ರೈತರ ಬಹಿರಂಗ ಸಭೆ ಕರೆದು ರೈತ ಮುಖಂಡರೊಂದಿಗೆ ಚರ್ಚಿಸಿ ನೀರನ್ನು ಬಿಡಲು ಆಗದ ಪಕ್ಷದಲ್ಲಿ ಬರ ಪ್ರದೇಶವೆಂದು ಘೋಷಿಸಿ ಎಕರೆಗೆ 50 ಸಾವಿರ ರೂ.ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿದರು.
ಅತ್ತಹಳ್ಳಿ ರಾಜು ಮಾತನಾಡಿ, ನರಗುಂದದ ಹೋರಾಟದಲ್ಲಿ ಮೃತರಾದ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರೈತರ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ರೈತನಿಧಿ ಸ್ಥಾಪಿಸಿ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಮೀಸಲಿಟ್ಟು, ರೈತರ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಕೋರಿದರು.
ಬೆಟ್ಟಹಳ್ಳಿ ಶಿವರಾಮು, ಎಂ.ವಿ.ಕೃಷ್ಣಪ್ಪ, ರಾಜು, ಯಾಚೇನಹಳ್ಳಿ ಚಿನ್ನಸ್ವಾಮಿ, ಬಾಣಗವಾಡಿ ಮಹದೇವ, ಕರಗೇಗೌಡ, ಜಯರಾಮು, ಪಾರ್ಥ, ಲೋಕೇಶ್, ಚಿಕ್ಕಮರಿಶೆಟ್ಟಿ, ಕುಚೇಲ, ಪಾಪಣ್ಣ, ಚೆನ್ನಪ್ಪ, ಮಲಿಯೂರು ರಾಜಣ್ಣ ಮತ್ತಿತರರು ಹಾಜರಿದ್ದರು.