

ಬೆಂಗಳೂರು: ಅಕ್ರಮ ಸಂಬಂಧದ ಶಂಕೆ ಮೇರೆಗೆ ನಡು ರಸ್ತೆಯಲ್ಲಿಯೇ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿಯನ್ನು ಎಲೆಕ್ಟ್ರಾನಿಕ್‌ಸಿಟಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕ ತೋಗೂರು ನಿವಾಸಿ ಶಾರದಾ(೩೫) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪದಡಿ ಶಾರದಾ ಅವರ ಪತಿ, ಬಾಗೇಪಲ್ಲಿ ಮೂಲದ ಕೃಷ್ಣಪ್ಪ ಅಲಿಯಾಸ್ ಕೃಷ್ಣನನ್ನು (೪೩) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ೧೭ ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಾರದಾ ಮನೆ ಕೆಲಸ ಮಾಡುತ್ತಿದ್ದರೆ, ಕೃಷ್ಣಪ್ಪ ಕೂಲಿ ಕಾರ್ಮಿಕನಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೃಷ್ಣಪ್ಪ ಪ್ರತಿನಿತ್ಯ ಮದ್ಯಪಾನ ಸೇವಿಸಿ ಪತ್ನಿಯ ಜತೆಗೆ ಜಗಳ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಇತ್ತೀಚೆಗೆ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪುತ್ರ ಕೃಷ್ಣಪ್ಪನ ಜತೆಗೆ ನೆಲಸಿದ್ದರೆ, ಪುತ್ರಿ ಶಾರದಾ ಅವರೊಂದಿಗೆ ಇದ್ದಳು. ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು ಎಂದು ಆರೋಪಿಸಿ ಕಳೆದ ೪ ವರ್ಷಗಳಿಂದ ಗಲಾಟೆ ಮಾಡುತ್ತಿದ್ದ.
ಹೊಂಚು ಹಾಕಿ ಕೊಲೆ:
ಶುಕ್ರವಾರ ರಾತ್ರಿ ೮ ಗಂಟೆಯ ವೇಳೆ ಕೆಲಸ ಮುಗಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೋಗೂರು ಬಳಿ ಶಾರದಾ ಅವರು ನಡೆದುಕೊಂಡು ಹೋಗುವಾಗ, ಚಾಕುವಿನಿಂದ ಆಕೆಯ ಕುತ್ತಿಗೆಗೆ ಹಲವು ಬಾರಿ ಇರಿದು ಕೊಲೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿಯನ್ನು ಕೊಲ್ಲಲು ಬಾಗೇಪಲ್ಲಿಯಿಂದ ಎರಡು ಚಾಕು ತಂದಿದ್ದ ಆರೋಪಿ ಆಕೆಯ ಕುತ್ತಿಗೆ ಸೀಳಿದ್ದ. ಗಂಭೀರವಾಗಿ ಗಾಯಗೊಂಡ ಶಾರದಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಎಂಟು ಗಂಟೆಗೆ ಪೊಲೀಸ್ ಸಹಾಯವಾಣಿಗೆ ಕರೆ ಬಂದಿತ್ತು. ಅದನ್ನು ಆಧರಿಸಿ ಸ್ಥಳಕ್ಕೆ ತೆರಳಿದಾಗ ಕೃತ್ಯ ನಡೆದಿರುವುದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.