ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲ್ಲೂಕಿನ ಅರಾಭಿಕೊತ್ತನೂರು ಬಳಿಯ ಬೆಟ್ಟದ ಬಳಿ ಜೆಸಿಬಿಯಿಂದ ಮಣ್ಣು ಅಗೆಯುವ ಕೆಲಸ ನಡೆಯುತ್ತಿದ್ದಾಗ ಬೃಹತ್ ಗಾತ್ರದ ಕಲ್ಲು ಬಂಡೆ ಜಾರಿ ಬಿದ್ದು ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಅರಾಭಿಕೊತ್ತನೂರು ಗ್ರಾಮದ ನಿವಾಸಿ ನಾಗರಾಜ್ (೩೫) ಮೃತ ಚಾಲಕ. ಟ್ರಾಕ್ಟರ್ ಟ್ರಾಲಿ ಮೇಲೂ ಕಲ್ಲುಬಂಡೆ ಜಾರಿದೆ. ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಟ್ರಾಕ್ಟರ್‌ಗಳಿಂದ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಜೆಸಿಬಿಯಿಂದ ಮಣ್ಣು ಅಗೆಯುತ್ತಿದ್ದಾಗ ಬೃಹತ್ ಗಾತ್ರದ ಕಲ್ಲುಬಂಡೆ ಜಾರಿದೆ. ಈ ಸಂದರ್ಭದಲ್ಲಿ ಟ್ರಾಕ್ಟರ್ ರಿವರ್ಸ್ ತೆಗೆದು ಪಕ್ಕದಲ್ಲಿ ನಿಂತಿದ್ದ ಚಾಲಕನ ತಲೆ ಮೇಲೆ ಬಿದ್ದಿದೆ. ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಸ್ಥಳದಲ್ಲಿದ್ದವರು ಪ್ರಕರಣಕ್ಕೆ ಬೇರೊಂದು ಕಥೆ ಕಟ್ಟಲು ಪ್ರಯತ್ನ ನಡೆದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ಘಟಕದ ಜಾಗವಿದೆ.
ಅವಘಡ ನಡೆದಿರುವ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹಾಗೂ ಕೋಲಾರ ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕೆರೆಗಳು ಹಾಗೂ ಬೆಟ್ಟಗುಡ್ಡಗಳಲ್ಲಿನ ಮಣ್ಣು ಅಗೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಪದೇಪದೇ ದೂರು ನೀಡುತ್ತಿದ್ದರೂ ಮಣ್ಣು ಅಗೆಯು ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿತ್ರ ೨೫ ಕೆ.ಎಲ್.ಆರ್. ೦೫ : ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದ ಟ್ರಾö್ಯಕ್ಟರ್ ಮೇಲೆ ಕಲ್ಲು ಬಂಡೆ ಉರುಳಿ ಟ್ರಾö್ಯಕ್ಟರ್ ಟ್ರಾಲಿ ಪಲ್ಟಿ ಹೊಡೆದಿರುವುದು. ಹಾಗೂ ಕಲ್ಲುಬಂಡೆ ಚಾಲಕನ ಮೇಲೆ ಉರುಳಿಬಿದ್ದಿರುವುದು.