

ಬಾಗಲಕೋಟೆ: ಪ್ರಸನ್ನ ವೆಂಕಟದಾಸರ ಜೀವನ ಆಧಾರಿತ ಚಲನಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ 7 ರಂದು ಬಾಗಲಕೋಟೆಯಲ್ಲಿ ಆಡಿಯೋ ರಿಲೀಸ್ ಹಾಗೂ ಅಕ್ಟೋಬರನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಡಾ.ಮಧುಸೂಧನ ಹವಾಲ್ದಾರ ಹೇಳಿದರು.
ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರ ಅವರ ಜೀವನ ಆಧಾರಿತ ಹಾಗೂ ಅವರ ಸಾಧನೆಗಳು, ಮಹಿಮೆ ಸೇರಿದಂತೆ ಭಕ್ತಿಯನ್ನೊಳಗೊಂಡ ಕಥೆ ರಚಿಸಿ ಚಿತ್ರ ಮಾಡಲಾಗಿದೆ. ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾತಾಂಬುಜ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಸುಧಾ ಸ್ವಾಮಿರಾವ್ ದೇಸಾಯಿ ಸಹ ನಿರ್ಮಾಪಕರಿಯಾಗಿದ್ದಾರೆ. ರೇಖಾ ಕಾಖಂಡಕಿ ಅವರ ಸಂಭಾಷಣೆ ಕಥೆ ಇದೆ. ರಾಯಚೂರು, ಗಂಗಾವತಿ, ಆನೆಗುಂದಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮುಕ್ಕಾಲು ಭಾಗ ಪೂರ್ಣಗೊಂಡಿದ್ದು, ಈಗ ಬಾಗಲಕೋಟೆ, ಬಾದಾಮಿ, ಬನಶಂಕರಿ, ಬೀಳಗಿ, ಹಾನಾಪೂರದ ಸ್ಥಳಗಳಲ್ಲಿ ಹಾಗೂ ಕೆರಕಲಮಟ್ಟಿಯ ವಾಡೆಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು ಅಂತಿಮ ಹಂತದಲ್ಲಿದೆ ಎಂದರು.
ಚಿತ್ರದ ಪಾತ್ರದಲ್ಲಿ ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ್, ಗಿರಿರಾವ, ಲೀಲಾ ಆಚಾರ ಮುಂತಾದವರು ಇದ್ದಾರೆ, ಸಂಗೀತ ಡಿ, ವಿಜಯಕೃಷ್ಣ ನೀಡಲಿದ್ದಾರೆ. ಬಾಗಲಕೋಟೆಯ ಅನಂತ ಕುಲಕರ್ಣಿ ಮತ್ತು ರಾಯಚೂರದ ಶೇಷಗಿರಿ ದಾಸ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಬಾಗಲಕೋಟೆಯ ಸಂಜೀವ ಜೋಶಿ ಅವರು ಪೇಶ್ವೆ ಮಹಾರಾಜರ ಬಲಗೈ ಭಂಟನ ಪಾತ್ರ ಸೇರಿದಂತೆ ಅನೇಕ ಸ್ಥಳೀಯ ಕಲಾವಿದರು ಚಿತ್ರದಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಹೇಳಿದರು.
ಖ್ಯಾತ ಗಾಯಕ ಅನಂತ ಕುಲಕರ್ಣಿ, ವಾಸವಿ ಚಿತ್ರ ಮಂದಿರ ಮಾಲೀಕ ಸಂಜೀವ ಜೋಶಿ, ಮುಖಂಡ ರಾಮಚಂದ್ರ ಕುಲಕರ್ಣಿ ಉಪಸ್ಥಿತರಿದ್ದರು.