ಅಕ್ಟೋಬರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ

R Ashok
Published on

ರಾಜ್ಯದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುತ್ತಾರೆ. ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗೋದು ನಿಜ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1999ರಲ್ಲಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಮುಖ್ಯಮಂತ್ರಿಯಾಗಲು ಮಲ್ಲಿಕಾರ್ಜುನ ಖರ್ಗೆ ಪ್ರಯತ್ನಪಡುತ್ತಿದ್ದಾರೆ. ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ ಎಂದು ಕುಟುಕಿದರು.

ಎಸ್.ಎಂ. ಕೃಷ್ಣ ಅವರು ನಿಧನರಾದ ಮೇಲೆ ಅವರ ಹೆಸರು ಹೇಳುತ್ತಾರೆ. ಅವರು ಸತ್ತ ಮೇಲೆ ಟೀಕೆ ಮಾಡುವ ಮೂಲಕ ಕೃಷ್ಣ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ದೂರಿದ ಅವರು, ರಾಜ್ಯದ ಆದಾಯ ಹೆಚ್ಚಾಗಲು ಎಸ್.ಎಂ. ಕೃಷ್ಣ ಕಾರಣ. ಅವರ ಪಾಂಚಜನ್ಯ ಯಾತ್ರೆಯಿಂದ ಕಾಂಗ್ರೆಸ್ ಅಕಾರಕ್ಕೆ ಬಂದಿತ್ತು. ಅವರು ಇದ್ದಾಗ ಖರ್ಗೆ ಈ ಮಾತು ಹೇಳಬೇಕಿತ್ತು ಎಂದು ಜರಿದರು.

ಸಿದ್ದರಾಮಯ್ಯ ಇಲ್ಲದಿದ್ದರೆ ಖರ್ಗೆ ಸಹಜವಾಗಿ ಮುಖ್ಯಮಂತ್ರಿಯಾಗುತ್ತಿದ್ದರು. ಈಗ ಖರ್ಗೆ ಸರಿಯಾದ ಟೈಮ್‌ಗೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗೋದು ನಿಜ. ಸಿಎಂ ಸ್ಥಾನಕ್ಕಾಗಿ ವರ ಕೊಡುವ ದೇವರ ಬಳಿಗೆ ಡಿ.ಕೆ.ಶಿವಕುಮಾರ್ ಹೋಗುತ್ತಿದ್ದಾರೆ. ಡಿಕೆಶಿಗೆ ಕಂಟಕ ಇರೋದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದವರಿಂದ ಎಂದು ಹೇಳಿದರು.

ಕೇರಳ ಸರ್ಕಾರದ ಕುಮ್ಮಕ್ಕು ಇದೆ

ಧರ್ಮಸ್ಥಳ ತಲೆ ಬುರುಡೆ ಶವ ಕೇಸ್ ವಿಚಾರವಾಗಿ ಮಾತನಾಡಿ, ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಯಾವುದೋ ಕಾಣದ ಕೈ ಇಲ್ಲಿ ಕೆಲಸ ಮಾಡುತ್ತಿದೆ. ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ, ಬುರುಡೆ ಬಿಡ್ತಾನೋ ಕಾದು ನೋಡೋಣ. ಧರ್ಮಸ್ಥಳದ ಸುದ್ದಿ ಕೇರಳದಲ್ಲಿ ಚರ್ಚೆ ಆಗುತ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರಬರುತ್ತೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಅಶೋಕ್ ಹೇಳಿದರು.

ಈ ಕೇಸ್ ಜಟಿಲ ಆಗುತ್ತಿಲ್ಲ, ಜಟಿಲ ಮಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ ಕೇಸ್ ಬ್ಯಾಕ್‌ಗ್ರೌಂಡ್ ಹಿಂದೆ ಇರೋದು ಕೇರಳ ಸರ್ಕಾರ. ಧರ್ಮಸ್ಥಳಕ್ಕೂ, ಕೇರಳಕ್ಕೂ ಏನು ಸಂಬಂಧ ಇದೆ? ಇಲ್ಲಿ ಆತ್ಮಹತ್ಯೆ ಆಗಿದೆಯೋ, ಕೊಲೆ ಆಗಿದೆಯೋ. ಪ್ರಕರಣವನ್ನು ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ನಾನು ಇದನ್ನು ಸ್ವಾಗತ ಮಾಡುತ್ತೇನೆ. ಧರ್ಮಸ್ಥಳದವರು ಕೂಡ ಇದನ್ನು ಸ್ವಾಗತ ಮಾಡಿದ್ದಾರೆ. ಪ್ರಗತಿಪರರ ಗ್ಯಾಂಗ್ ನಾಳೆ ಎಸ್‌ಐಟಿಯನ್ನು ಕೂಡ ಒಪ್ಪಲ್ಲ ಅಂತ ಅನ್ನಿಸುತ್ತಿದೆ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ. ಅವರ ಪರ ರಿಪೋರ್ಟ್ ಕೊಟ್ಟರೆ ಸರಿ ಅಂತ ಒಪ್ಪಿಕೊಳ್ಳುತ್ತಾರೆ. ಈ ಕುರಿತು ಒಂದು ತಂಡ ಮುಂದೆ ಕಿತಾಪತಿ ಮಾಡಬಹುದು. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net