ಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ನಗರಸಭೆ ಮತ್ತು ಪುರಸಭೆ ಪಟ್ಟಣ ಪಂಚಾಯತಿ ಅಧೀನದಲ್ಲಿರುವ ಎಲ್ಲಾ ಉದ್ಯಾನವನಗಳು ಮುಂಬರುವ ಅಕ್ಟೊಬರ್ ೨ರ ಗಾಂಧಿ ಜಯಂತಿ ಒಳಗಾಗಿ ಸುಸಜ್ಜಿತ ಗೊಳಿಸಬೇಕೆಂದು ಹಾಗೂ ಸಂಪೂರ್ಣ ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುಂದಿನ ತಿಂಗಳು ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಇರುವುದರಿಂದ ಎಲ್ಲಾ ಉದ್ಯಾನವನದಲ್ಲಿಯೂ ಇದೇ ಭಾನುವಾರ ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರು ಸೇರಿ ಶ್ರಮಧಾನವನ್ನು ಪ್ರಾರಂಭ ಮಾಡಬೇಕು. ಈ ಕಾರ್ಯವು ಅಕ್ಟೋಬರ್ ೨ ವರೆಗೂ ನಿರಂತರವಾಗಿ ಮುನ್ನಡೆಸಿ ಎಲ್ಲಾ ಉದ್ಯಾನವನಗಳನ್ನು ಆಕರ್ಷಕ ರೀತಿಯಲ್ಲಿ ಕಾಣುವಂತೆ ಮಾಡಿ ಸಾರ್ವಜನಿಕರಿಗೆ ಒದಗಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಪಾರ್ಕ್ಗಳಲ್ಲಿ ಮರಗಳಿಂದ ಒಣಗಿ ಉದುರುವ ಎಲೆಗಳನ್ನು ಒಂದೆಡೆ ಸಂಗ್ರಹಿಸಿ ಗೊಬ್ಬರವನ್ನು ಉತ್ಪತ್ತಿ ಮಾಡಲು ತಿಳಿಸಿದರು. ಅದೇರೀತಿ ನಗರದ ವಿವಿಧ ಭಾಗಗಳಲ್ಲಿ ಯಾವುದೇ ರೀತಿಯ ಕಸಕ್ಕೆ ಬೆಂಕಿ ಇಡುವುದನ್ನು ತಪ್ಪಿಸಬೇಕು. ಇದನ್ನು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರಸಭೆ, ಪುರಸಭೆಗಳ ಮುಖ್ಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಉದ್ಯಾನ ವನಗಳಲ್ಲಿ ವಿದ್ಯುತ್ ಬೀದಿ ದೀಪಗಳನ್ನು ಹಾಗೂ ಸಾರ್ವಜನಿಕರಿಗೆ ವಾಯು ವಿಹಾರಕ್ಕಾಗಿ ಸೂಕ್ತ ರಸ್ತೆ ಕುಳಿತು ಕೊಳ್ಳಲು ಕಲ್ಲಿನ ಬೆಂಚ್‌ಗಳನ್ನೂ ಅಳವಡಿಸಿ ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ತಿಳಿಸಿದರು.
ನಗರಸಭೆಯ ಮತ್ತು ಪುರಸಭೆಯ ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಬೇಕು. ಸಮುದಾಯ ಸಂಘಟಕರು ಹಾಗೂ ಸ್ವಯಂ ಸೇವಕರನ್ನು ಬಳಸಿಕೊಳ್ಳಬೇಕು. ಅವರಿಗೆ ಸಮವಸ್ತç ಮತ್ತು ಗುರುತಿನ ಚೀಟಿಯನ್ನು ನೀಡಬೇಕು ಎಂದು ಸೂಚಿಸಿದರು.
ಈಗಾಗಲೇ ಕೋಲಾರ ನಗರಸಭೆ ಮತ್ತು ಶ್ರೀನಿವಾಸಪುರ ಪುರಸಭೆ ವತಿಯಿಂದ ಉತ್ತಮ ಆಹಾರ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳ ಹಂಚಿಕೆಯಲ್ಲಿ ಯಾವುದೇ ಲೋಪ ನಡೆಯದಂತೆ ಕ್ರಮವಹಿಸಲು ಸೂಚಿಸಿದರು. ಇನ್ನೂ ಉಳಿದ ಸ್ಥಳೀಯ ಸಂಸ್ಥೆಗಳು ಸೂಕ್ತವಾದ ಸ್ಥಳವನ್ನು ಗುರುತಿಸಿ ಆಹಾರ ಮಳಿಗೆಗಳನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶ ಅಧಿಕಾರಿ ಅಂಬಿಕಾ, ಎಇಇ ಶ್ರೀನಿವಾಸ್, ಕೋಲಾರ ನಗರಸಭೆ ಆಯುಕ್ತ ನವೀನ್‌ಚಂದ್ರ ಮತ್ತು ಎಲ್ಲಾ ತಾಲ್ಲೂಕಿನ ಪುರಸಭೆಗಳ ಮುಖ್ಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ೦೪ ಕೆ.ಎಲ್.ಆರ್. ೦೨ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಡೆಸಿದರು.