

ಯಾದಗಿರಿ: ನಿಷ್ಕಲ್ಮಶ ಮನೋಭಾವದಿಂದ ನಾವು ಮಾಡುವ ಸತ್ಕಾರ್ಯಗಳು ಭಗವಂತನ ಮನಸ್ಸು ಗೆಲ್ಲುತ್ತವೆ ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮರುಘಾರಾಜೇಂದ್ರ ಸ್ವಾಮಿಗಳು ನುಡಿದರು.
ಬುಧವಾರ ಇಲ್ಲಿನ ವಿದ್ಯಾಧರ ಗುರೂಜಿ ವಾಚನಾಲಯದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಂಶೋಧಕ ಡಿ.ಎನ್.ಅಕ್ಕಿ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಫಲದ ಆಸೆ ಇಲ್ಲದೆ ನಾವು ಕೆಲಸ ಮಾಡಬೇಕು. ಮಾಡುವ ಕಾರ್ಯಗಳಲ್ಲಿ ಒಳ್ಳೆತನವಿದ್ದರೆ ಮುಂದೆ ನಮಗೆ ಸನ್ಮಾನ, ಸತ್ಕಾರಗಳು ಪ್ರಾಪ್ತಿಯಾಗುತ್ತವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನೆಂದು ಪ್ರಶಸ್ತಿ ಆಸೆ ಬಿದ್ದವನಲ್ಲ. ಆದರೂ ಕೂಡಾ ಜಿಲ್ಲೆಯ ಜನತೆ ನನ್ನ ಬಗ್ಗೆ ಅಭಿಮಾನದ ಹೊಳೆಯನ್ನೇ ಹರಿಸಿದ್ದಾರೆ. ಸಂಶೋಧನೆ, ಚಿತ್ರಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ನಾನು ಮಾಡಿದ ಅಲ್ಪ ಸೇವೆಯನ್ನು ಇಷ್ಟಪಟ್ಟು ನನಗೆ ಗೌರವ ನೀಡಿದ್ದಾರೆ. ನಿಮ್ಮೆಲ್ಲರ ಈ ಪ್ರೀತಿ ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ವಡಿಗೇರಾ ಕಸಾಪ ಅಧ್ಯಕ್ಷ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ಅಕ್ಕಿ ಅವರು ತಮ್ಮ ವೃತ್ತಿ ಜತೆ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಿ, ಅವುಗಳ ಉಳಿವಿಗೆ ಹೋರಾಟ ಮಾಡಿದ್ದಾರೆ. ಅವರು ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಒಂದು ಸಣ್ಣ ಕಲ್ಲಿನ ವಿಶೇಷತೆ ಕಂಡು ಬಂದರೂ ಅದನ್ನು ತಮ್ಮ ಜೇಬಿಗಿಳಿಸಿ, ಅದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು ಎಂದು ಅಕ್ಕಿ ಅವರ ಸೇವೆ ಕೊಂಡಾಡಿದರು. ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಭೀಮರಾಯ ಲಿಂಗೇರಿ, ಬಸವರಾಜ ಮೋಟ್ನಳ್ಳಿ, ನೊರೆಂದಪ್ಪ ಲೇವಡಿ ಇದ್ದರು.
ಶಿವಶರಣಪ್ಪ ನಾಸಿ, ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರ. ಡಾ.ಎಸ್.ಎಸ್.ನಾಯಕ್ ಸ್ವಾಗತಿಸಿದರು.