ವಿಜಯವಾಣಿ ಸುದ್ದಿಜಾಲ ಕೋಲಾರ
ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಸಹನಾ ಕುಟುಂಬಸ್ಥರ ಪರವಾಗಿ ರಾಜ್ಯ ಸರ್ಕಾರ ಸೇರಿದಂತೆ ನಾವು ಇದ್ದೇವೆ. ಇಂತಹ ಘಟನೆ ನಡೆಯಬಾರದಿತ್ತು. ಅಕಸ್ಮಿಕವಾಗಿ ನಡೆದಿರುವ ಘಟನೆಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್.ಸಿ.ಬಿ ತಂದ ಐಪಿಎಲ್ ಟೂರ್ನಮೆಂಟ್ ಟ್ರೋಪಿಯನ್ನು ೧೮ ವರ್ಷಗಳ ಬಳಿಕೆ ಗೆದ್ದಿರುವ ಹಿನ್ನಲೆ ವಿಜಯೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತಕ್ಕೆ ತುತ್ತಾಗಿ ಸಾವನ್ನಪ್ಪಿದ ಕೋಲಾರದ ಎಸ್.ಜಿ ಬಡಾವಣೆಯ ಶಿಕ್ಷಕರ ದಂಪತಿಗಳ ಮೊದಲನೆ ಪುತ್ರಿ ಸಹನ ಅಂತ್ಯಕ್ರಿಯೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಘಟನೆ ನಡೆಯಬಾರದಿತ್ತು ನಡೆದುಹೋಗಿದೆ. ತಂದೆ ತಾಯಿ ಇಷ್ಟು ವರ್ಷ ಬೆಳೆಸಿ ವಿದ್ಯಾಭ್ಯಾಸ ನೀಡಿ ಕುಟುಂಬಕ್ಕೆ ಆಸರೆಯಾಗುತ್ತಾಳೆ ಎನ್ನುವ ಸಮಸಯದಲ್ಲಿ ಅಕಸ್ಮಿಕವಾಗಿ ಘಟನೆ ನಡೆದು ಸಹನಾ ಸಾವನ್ನಪ್ಪಿದ್ದಾರೆ. ಈ ರೀತಿಯ ಘಟನೆ ನಡೆಯಬಾರದಿತ್ತು, ದುಃಖ ತಂದಿದೆ. ಯಾರದು ತಪ್ಪು ಅಂತ ಹೇಳೋಕೆ ಬಯಸೋದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ತೆಗೆದಾಗ ಅಭಿಮಾನಿಗಳು ಓಡುವಾಗ ಕಾಲ್ತುಳಿತ ಆಗಿದೆ ಎಂದು ಘಟನೆಯನ್ನು ವಿವರಿಸಿದರು.
ಆರ್.ಸಿ.ಬಿ ತಂಡ ೧೮ ವರ್ಷ ಬಳಿಕೆ ಟ್ರೋಪಿಯನ್ನು ಗೆದ್ದಿದೆ. ಗೆದ್ದ ಖುಷಿಗೆ ಸಂಭ್ರಮಾಚರಣೆ ಆಚರಣೆ ಮಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಈ ರೀತಿ ತರಾತುರಿಯಲ್ಲಿ ಮಾಡೋದು ಸರಿ ಅಲ್ಲ. ನಮ್ಮ ತಂಡ ನೋಡಿ ಖುಷಿ ಪಡಬೇಕು. ಅದರ ಜೊತೆಗೆ ಜವಾಬ್ದಾರಿ ಇರಬೇಕು ಎಂದು ತಿಳಿಸಿದರು.
ಘಟನೆಗೆ ರಾಜಕೀಯ ಬೆರೆಸಬಾರದು :
ಕಾಲ್ತುಳಿತ ಪ್ರಕರಣ ಅಕಸ್ಮಿಕವಾಗಿ ನಡೆದಿರುವ ಘಟನೆ ಇದಕ್ಕೆ ರಾಜಕೀಯಕ್ಕೆ ಬೆರೆಸಬಾರದು. ಉದ್ದೇಶದಿಂದ ಯಾರು ಮಾಡಿಲ್ಲ. ಅಚಾನಕ್ಕಾಗಿ ರಸ್ತೆಯಲ್ಲಿ ಅಪಘಾತ ಆಗುತ್ತೆ, ಯಾರು ಬೇಕು ಅಂತ ಮಾಡೋದಿಲ್ಲ. ವಿಜಯೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರೋದಿಲ್ಲ ಎನ್ನುವ ನಿರೀಕ್ಷೆ ಇತ್ತು. ಆದರೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಸೇರಿದ್ದರಿAದ ಅವರನ್ನು ನಿಯಂತ್ರಿಸಲು ಪೋಲೀಸರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆದರೂ ಮೂರು ಲಕ್ಷ ಸೇರಿದ್ದಾಗ ಎಷ್ಟು ಜನ ಪೊಲೀಸ್ ಹಾಕೋಕೆ ಆಗುತ್ತೆ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.
ಬಿಜೆಪಿಯಿಂದ ರಾಜಕೀಯ :
ಬಿಜೆಪಿಯವರು ಈ ಘಟನೆಯನ್ನು ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಅದರೆ ಕರ್ನಾಟಕ ಕ್ರಿಕೆಟ್ ಕಮಿಟಿ ರವರು ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರ್.ಸಿ.ಬಿ ತಂಡವನ್ನು ಕರೆಸಿತ್ತು. ಆರ್.ಸಿ.ಬಿ ತಂಡದಲ್ಲಿ ದೇಶದವರಲ್ಲದೆ ಹೊರದೇಶದವರು ಇದ್ದರೂ ಟ್ರೋಪಿ ಗೆದ್ದ ನಂತರ ಅವರು ಅವರ ದೇಶಕ್ಕೆ ಮರಳಿದರೆ ವಿಜಯೋತ್ಸವನ್ನು ಎಲ್ಲಾ ಆಟಗಾರರ ಒಟ್ಟಿಗೆ ಆಚರಿಸಲು ಸಾಧ್ಯವಾಗುದಿಲ್ಲ ಎಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಬಸ್ ವ್ಯವಸ್ಥೆ ಜೊತೆ ಬೆಂಬಲ ನೀಡಿದೆ.
೫೦ ಸಾವಿರ ಜನ ಸೇರುತ್ತಾರೆಂದು ಎಂದು ತಿಳಿದುಕೊಂಡಿದ್ದೆವು. ಆದ್ರೆ ಮೂರು ಲಕ್ಷ ಜನ ಸೇರಿದ್ದರು. ತರಾತುರಿಯಲ್ಲಿ ವ್ಯವಸ್ಥೆ ಮಾಡಿರೋದಕ್ಕೆ ನನ್ನ ವಿರೋಧ ಇದೆ. ಆರ್.ಸಿ.ಬಿ ಸಂಭ್ರಮಾಚಾರಣೆ ಮಾಡೋ ಅವಶ್ಯಕತೆ ನನಗೂ ಇತ್ತು. ನಾವು ಚುನಾವಣೆ ಗೆದ್ದಾಗಲೇ ವಿಜಯೋತ್ಸವ ಮಾಡುತ್ತೇವೆ. ೧೮ ವರ್ಷ ಬಳಿಕ ಆರ್.ಸಿ.ಬಿ ಗೆದ್ದಿದೆ, ವಿಜಯೋತ್ಸವ ಮಾಡೋದ್ರಲ್ಲಿ ತಪ್ಪಿಲ್ಲ. ಪೊಲೀಸ್ ವೈಫಲ್ಯ ಆಗಿಲ್ಲ. ಗೃಹ ಸಚಿವರು ರಾಜೀನಾಮೆ ಅವಶ್ಯಕತೆ ಇಲ್ಲ. ರಾತ್ರಿ ನಿದ್ದೆಗೆಟ್ಟು ಪೊಲೀಸರು ಕೆಲಸ ಮಾಡಿದ್ದಾರೆ. ಊಹೆಗೂ ಮೀರಿ ಹೆಚ್ಚಿನ ಜನರು ಬಂದಿದ್ದು ಕಾರಣ. ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ ಕ್ರಮ ಆಗುತ್ತೆ ಎಂದರು.
ಈ ಸಂದರ್ಭದಲ್ಲಿ ಎಂಎಲ್.ಸಿ ಅನೀಲ್ ಕುಮಾರ್, ಮೈಲಾಂಡಹಳ್ಳಿ ಮುರಳಿ, ಸಹನಾ ಕುಟುಂಬಸ್ಥರು ಇದ್ದರು.
ಚಿತ್ರ ೦೫ ಕೆ.ಎಲ್.ಆರ್. ೦೬ : ಕಾಲ್ತುಳಿತಕ್ಕೆ ಬಲಿಯಾಗಿರುವ ಸಹನಾ ಕುಟುಂಬಕ್ಕೆ ಸಾಂತ್ವನ ಹೇಳುತ್ತಿರುವ ಎಂ.ಎಲ್.ಎ. ಕೊತ್ತೂರು ಜಿ.ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್ ಮುಂತಾದವರು ಇದ್ದರು.