ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಿ

23 nrp 3 dss.
ಎನ್.ಆರ್.ಪುರ ತಾಲೂಕಿನ ಕಾನೂರಿನಲ್ಲಿ ಡಿಎಸ್‌ಎಸ್ (ಕೃಷ್ಣಪ್ಪ ಬಣ) ಆಯೋಜಿಸಿದ್ದ, ತಾಲೂಕು ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಸಂಚಾಲಕ ಡಿ.ರಾಮು ಉದ್ಘಾಟಿಸಿದರು. ಎ.ಸಿ.ಶ್ರೀನಿವಾಸ್, ವಿಮಲಾ, ನಾಗರಾಜ್, ಜಾರ್ಜ್, ಸುಜಿತ್, ಚಂದ್ರಶೇಖರ್, ಹರಿಣಿ ಇದ್ದರು.
Published on

ಎನ್.ಆರ್.ಪುರ: 2023-24ರಲ್ಲೇ ಶಾಸಕರಿಗೆ ಕಾನೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರೂ ಅದು ಆಗಲಿಲ್ಲ. ಹೀಗಾಗಿ ಈ ಬಾರಿಯಾದರೂ 10 ಗುಂಟೆ ಜಾಗವನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಡಬೇಕೆಂದು ಡಿಎಸ್‌ಎಸ್ (ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಡಿ.ರಾಮು ಒತ್ತಾಯಿಸಿದರು.

ತಾಲೂಕಿನ ಕಾನೂರಿನಲ್ಲಿ ಡಿಎಸ್‌ಎಸ್ (ಕೃಷ್ಣಪ್ಪ ಬಣ) ಆಯೋಜಿಸಿದ್ದ ತಾಲೂಕು ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂರು ಗ್ರಾಮಕ್ಕೆ ಗಣಪತಿ ಪೆಂಡಾಲ್ ಅವಶ್ಯಕತೆ ಇದೆ. ಶಾಸಕರು ಅನುದಾನವನ್ನು ನೀಡಿ ಕಾಮಗಾರಿಗೆ ಸಹಕರಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯವರೆಗೂ ಅಸ್ಪಶ್ಯತೆಯ ವಿರುದ್ಧ ಹೋರಾಡಿದವರು. ಕೆಳವರ್ಗದ ಜನರ, ಹಿಂದುಳಿದ ವರ್ಗಗದವರ ಪಾಲಿಗೆ ಆಶಾಕಿರಣವಾದವರು. ನಾವೆಲ್ಲರೂ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕೆಂದು ತಿಳಿಸಿದರು.

ಡಿಎಸ್‌ಎಸ್ ಕ್ಷೇತ್ರ ಮಹಿಳಾ ಸಂಚಾಲಕಿ ವಿಮಲಾ ಮಾತನಾಡಿ, ಹಿಂದೆ ನಮ್ಮ ಜನಾಂಗದವರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಸಮಾಜದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿತ್ತು. ನಮಗೆ ಸ್ವಾತಂತ್ರೃವೇ ಇರಲಿಲ್ಲ. ನಮ್ಮ ಜನಾಂಗಕ್ಕೆ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳನ್ನು ನೀಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದರು.

ತಾಲೂಕು ಸಂಚಾಲಕಿ ಪವಿತ್ರಾ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಂದೇ. ಜಾತಿ ಧರ್ಮ ಬಿಟ್ಟು ನಾವೆಲ್ಲರೂ ಮನುಷ್ಯರು ಎಂಬ ಭಾವನೆಯಿಂದ ಬಾಳಬೇಕು. ಮನುಷ್ಯತ್ವದ ಮುಂದೆ ಜಾತಿ, ಧರ್ಮ ಯಾವುದೂ ಬರುವುದಿಲ್ಲ. ನಾವು ಇನ್ನೊಬ್ಬರಿಗೆ ರಕ್ತ ಕೊಡುವಾಗ ಜಾತಿ ಕೇಳುವುದಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ರಚಿಸದೆ ಹೋಗಿದ್ದರೆ ನಮ್ಮ ಜನಾಂಗ ಇಷ್ಟರ ಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್, ಕಾನೂರು ಗ್ರಾಮದ ಸಂಚಾಲಕ ಸುಜಿತ್, ಕಾರ್ಯದರ್ಶಿ ಚಂದ್ರಶೇಖರ್, ಛಲವಾದಿ ಮಹಾಸಭಾದ ಚಂದ್ರಶೇಖರ್, ನಾಗರಾಜ್, ಜಾರ್ಜ್, ಪವಿತ್ರಾ, ಶುಭಾ, ಪ್ರಮೀಳಾ, ಸುನಿಲ್, ಹರಿಣಿ, ಬಾಬು, ಚಂದ್ರು, ಸುಮಲತಾ, ಶ್ರೀರಾಮ ಹಾಗೂ ಡಿಎಸ್‌ಎಸ್‌ನ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net