

ಚಿತ್ರದುರ್ಗ: ಯುರೇನಿಯಂ ಒಂದು ಮೂಲ ಲೋಹ ದಾತು. ವಿಕಿರಣಶೀಲ ವಸ್ತು, ನೈಸರ್ಗಿಕವಾಗಿ ಅಗ್ನಿ, ಪದರ, ರೂಪಾಂತರ ಶಿಲೆಗಳಲ್ಲಿ ದೊರೆಯುತ್ತದೆ. ಆದರೆ, ಇತ್ತೀಚೆಗೆ ಅಂತರ್ಜಲದಲ್ಲೂ ಯುರೇನಿಯಂ ಮಾಲಿನ್ಯ ಹೆಚ್ಚುತ್ತಿದೆ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ.ಪರಶುರಾಮ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ, ಮಂಗಳೂರು ವಿದ್ಯಾಲಯದ ಪರಿಸರ ವಿಕಿರಣಶೀಲ ವಿಭಾಗದ ವಿಜ್ಞಾನಿಗಳು ಕರ್ನಾಟಕ ಪೂರ್ವ ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ 73 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಈ ಕುರಿತು ರಾಸಾಯನಿಕವಾಗಿ ವಿಶ್ಲೇಷಿಸಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯುರೇನಿಯಂ ಅಂಶದ ಪರಿಮಿತಿ 30 ಮೈಕ್ರೋಗ್ರಾಂ./ಲೀ ಆಗಿದೆ. ಭಾರತದ ಪರಮಾಣುಶಕ್ತಿ ನಿಯಂತ್ರಣ ಮಂಡಳಿ ಪ್ರಕಾರ 60 ಮೈಕ್ರೋಗ್ರಾಂ./ಲೀ ಎಂದು ನಿಗದಿಪಡಿಸಲಾಗಿದೆ. ಆದರೆ, ಮೇಲ್ಕಂಡ 73 ಹಳ್ಳಿಗಳ ಪೈಕಿ 57 ಗ್ರಾಮಗಳಲ್ಲಿನ ಅಂತರ್ಜಲದಲ್ಲಿ ಯುರೇನಿಯಂ ಅಂಶ 30 ಮೈಕ್ರೋಗ್ರಾಂ./ಲೀ. ಗಿಂತ ಹೆಚ್ಚಾಗಿದೆ. ಜತೆಗೆ 48 ಹಳ್ಳಿಗಳಲ್ಲಿ 60 ಮೈಕ್ರೋಗ್ರಾಂ./ಲೀ. ಗಿಂತ ಅಧಿಕವಾಗಿರುವುದು ಕಂಡು ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ತಲಾ 1, ಚಿಕ್ಕಬಳ್ಳಾಪುರ 7, ಕೋಲಾರದ 5 ಹಳ್ಳಿಗಳಲ್ಲಿ 1,000 ಮೈಕ್ರೋಗ್ರಾಂ./ಲೀ. ಗಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಜಿಲ್ಲೆಗಳ ಸಮೀಪದಲ್ಲಿ ಯಾವುದೇ ಪರಮಾಣು ವಿದ್ಯುತ್ ಸ್ಥಾವರಗಳಿಲ್ಲ. ಆದರೂ ಯುರೇನಿಯಂ ಪ್ರಮಾಣ ಅಧಿಕವಾಗಲು ಮಾನವರು ಮಿತಿ ಮೀರಿದ ಕೊಳವೆಬಾವಿಗಳನ್ನು ಕೊರೆಸಿ, ಬಳಕೆ ಮಾಡುತ್ತಿರುವುದರಿಂದ ಅಂತರ್ಜಲ ತೀವ್ರ ಪ್ರಮಾಣದಲ್ಲಿ ಕುಗ್ಗುತ್ತಿದೆ. ಕೆಳಮಟ್ಟಕ್ಕೆ ತಲುಪಿ, ಯುರೇನಿಯಂ ಅಂಶದ ಸಾಂದ್ರತೆ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭೂ ವೈಜ್ಞಾನಿಕ ಅಧ್ಯಯನದ ನಕಾಶೆ, ಆರ್ ಗಾಮಕಿರಣ ಸ್ಪೇಕ್ಟೋಮಿಟಿಕ್ ಅಧ್ಯಯನದಿಂದ ಈ ಜಿಲ್ಲೆಗಳಲ್ಲಿ ಪೋಟಾಶಿಯಂ, ಯುರೇನಿಯಂ ಮತ್ತು ತೋರಿಯಂ ಖನಿಜದ ಲಭ್ಯತೆ ಇರುವ ಮಾಹಿತಿಯನ್ನು ವರದಿಗಳು ಹಂಚಿಕೊಂಡಿವೆ. ಹೆಚ್ಚಿನ ಯುರೇನಿಯಂ ಅಂಶದ ನೀರನ್ನು ಸೇವಿಸುವುದರಿಂದ ಕ್ರಮೇಣ ಕಿಡ್ನಿ, ಲಿವರ್, ಕ್ಯಾನ್ಸರ್, ಥೈರಾಯಿಡ್ ಸೇರಿ ಇನ್ನಿತರೆ ಕಾಯಿಲೆಗಳು ಕಾಡುವ ಸಂಭವ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತರ್ಜಲದಲ್ಲಿ ಯುರೇನಿಯಂ ಅಂಶವನ್ನು ಬೇರ್ಪಡಿಸಲು ಇರುವ ವೈಜ್ಞಾನಿಕ ವಿಧಾನಗಳಲ್ಲಿ ಆರ್‌ಒ ಘಟಕದಿಂದ ಶುದ್ಧೀಕರಿಸುವ ವಿಧಾನ ಈಗಾಗಲೇ ಬಳಕೆಯಲ್ಲಿದೆ. ಆದ್ದರಿಂದ ಡಬ್ಲುೃಎಚ್‌ಒ, ಮಂಡಳಿ ನಿಗದಿಪಡಿಸಿದ ಪ್ರಮಾಣದ ನೀರನ್ನು ಕುಡಿಯಲು ಉಪಯೋಗಿಸುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹೆಚ್ಚಿನ ಯುರೇನಿಯಂ ಅಂಶಗಳಿರುವ ಜಲನಯನ ಪ್ರದೇಶಗಳಲ್ಲಿ ಅಂತರ್ಜಲ ಮರುಪೂರಣ ರಚನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಶುದ್ಧ ನೀರು ಸಾರ್ವಜನಿಕರಿಗೆ ನೀಡಲು ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.