ಅಂತರಂಗ; ಸಂಕಲ್ಪ, ಸಾಧನೆ, ಸಮರ್ಪಣೆ

Antaranga vvani
Published on
ಮಾಡಲೇಬೇಕು, ಪಡೆಯಲೇಬೇಕು ಎಂಬ ಸಂಕಲ್ಪ ಮೊದಲು ಬೇಕು. ‘ಹೋದರೆ ಹೋಗಲಿ, ಬಂದರೆ ಬರಲಿ’ ಎಂದು ಭಾವಿಸಿಕೊಂಡರೆ ಏನೂ ಆಗುವುದಿಲ್ಲ. ಸಾಧಿಸಿಯೇ ತೀರುವೆನೆಂಬ ಉತ್ಸಾಹದ ಸಂಕಲ್ಪ ಮೊದಲು ಬೇಕು. ಉತ್ಸಾಹದ ಸಂಕಲ್ಪವೇ ಸಾಧನೆಯ ಮುಖಾಂತರ ಸಿದ್ಧಿಗೆ ಏರಿಸುತ್ತದೆ. ಬರೀ ಸಂಕಲ್ಪ ಮಾಡಿಕೊಳ್ಳುತ್ತ ಕುಳಿತರೆ ಮುಟ್ಟಬೇಕಾದ ಗುರಿಯನ್ನು ಮುಟ್ಟುವದಿಲ್ಲ. ಸಂಕಲ್ಪದೊಂದಿಗೆ ಸಾಧನೆಯೂ ಮುಖ್ಯ.

ಕಡಲತೀರದಲ್ಲಿ ಮಹಾರಾಜನೊಬ್ಬನ ಅರಮನೆ ಇತ್ತು. ಅಕಸ್ಮಾತ್ತಾಗಿ ಆ ಅರಮನೆಗೆ ಬೆಂಕಿ ಬಿದ್ದಿತು. ಗಾಬರಿಗೊಂಡ ಪ್ರಜೆಗಳೆಲ್ಲ ಸಮುದ್ರದಿಂದ ನೀರನ್ನು ತಂದು ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡತೊಡಗಿದರು. ಆಗ ಗುಬ್ಬಿಯೊಂದು ಬಾಯಲ್ಲಿ ನೀರನ್ನು ತುಂಬಿಕೊಂಡು ಬೆಂಕಿಗೆ ಹಾಕಿ ಆರಿಸುವ ಪ್ರಯತ್ನ ಮಾಡುತ್ತಿತ್ತು.

ಆಗ ಅಲ್ಲಿಗೆ ಒಬ್ಬ ಬಂದ. ಆತ ಗುಬ್ಬಿಯನ್ನು ಕೇಳಿದ, ‘ನೀನು ಇಷ್ಟು ಸಣ್ಣ ಪಕ್ಷಿ. ಹನಿ ಹನಿ ನೀರನ್ನು ಬಾಯಿಯಲ್ಲಿ ತುಂಬಿಕೊಂಡು ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡುತ್ತಿರುವೆ. ಈ ಹನಿ ನೀರಿನಿಂದ ಬೃಹತ್ ಉರಿಯನ್ನು ಆರಿಸಲು ಸಾಧ್ಯವೇ? ವ್ಯರ್ಥ ಪ್ರಯತ್ನ ಮಾಡುತ್ತಿರುವೆ. ಬಿಟ್ಟುಬಿಡು’ ಎಂದ.

ಆಗ ಗುಬ್ಬಿ ಹೇಳಿತು, ‘ನಾನು ಹೊತ್ತು ತಂದ ನೀರಿನಿಂದ ಆ ಬೆಂಕಿ ಆರುವುದಿಲ್ಲ ಎಂಬುದು ನನಗೂ ಗೊತ್ತಿದೆ. ಆದರೂ ನಾನು ಪ್ರಯತ್ನಿಸುತ್ತಿರುವುದು ಯಾಕೆ ಎಂಬುದು ನಿನಗೆ ಗೊತ್ತಿದೆಯೆ? ನೋಡು, ನಾಳೆ ಇತಿಹಾಸದಲ್ಲಿ ನನ್ನ ಪಾತ್ರ ಉಳಿಯುತ್ತದೆ. ಈ ರಾಜನ ಈ ಅರಮನೆಯ ಇತಿಹಾಸ ಬರೆಯುವಾಗ - ರಾಜನ ಅರಮನೆಗೆ ಬೆಂಕಿ ಹೊತ್ತಿದ ವಿಚಾರವೂ ಬರುತ್ತದೆ.

ಗುಬ್ಬಿಯೊಂದು ಕೂಡ ಬೆಂಕಿ ಆರಿಸುವ ಪ್ರಯತ್ನ ಮಾಡಿತ್ತು ಎಂಬ ಇತಿಹಾಸದ ಸಾಲಿನಲ್ಲಿ ನಾನು ಕುಳಿತುಕೊಳ್ಳುತ್ತೇನೆ. ಶ್ರೀರಾಮ ಸಮುದ್ರಕ್ಕೆ ಸೇತುಬಂಧನ ಮಾಡುವಾಗ ಅಳಿಲೊಂದು ಉಸುಕಿನಲ್ಲಿ ಹೊರಳಾಡಿ ಆ ಕಣಗಳನ್ನು ಸೇತುಬಂಧಕ್ಕೆ ನೀಡಲಿಲ್ಲವೇ? ಅದು ರಾಮಾಯಣದಲ್ಲಿ ಅಜರಾಮರವಾಗಿ ಉಳಿಯಲಿಲ್ಲವೇ? ಹಾಗೆಯೇ ನಾನೂ ಇತಿಹಾಸದ ಪುಟದಲ್ಲಿ ಬೆಂಕಿ ಆರಿಸುವವರ ಸಾಲಿನಲ್ಲಿ ಕುಳಿತುಕೊಳ್ಳುತ್ತೇನೆ’ ಎಂದಿತು ಗುಬ್ಬಿ.

ಮನುಷ್ಯ ಎಷ್ಟು ದಿನ ಬದುಕುತ್ತಾನೆಂಬುದು ಮಹತ್ವದ್ದಲ್ಲ. ಎಷ್ಟೇ ದಿನ ಬದುಕಿರಲಿ, ಅದು ಆದರ್ಶಮಯ ಬದುಕಾಗಬೇಕು. ಸತ್ಯಸಂಕಲ್ಪದ ನಿರ್ಧಾರ ಗಟ್ಟಿಯಾಗಿರಬೇಕು. ಅದಕ್ಕಾಗಿ ಸಾಧನೆ ಮುಂದುವರಿಯಬೇಕು. ‘ಭಗವಂತನೇ, ಇದೆಲ್ಲವೂ ನಿನ್ನದೇ’ ಎಂಬ ಸಮರ್ಪಣಾ ಮನೋಭಾವವೂ ಇರಬೇಕು. ಆಗ ಮಾನವಜನ್ಮ ಸಾರ್ಥಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net