

ನೈತಿಕತೆ ಎಂಬುದು ಮನುಷ್ಯಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಒಬ್ಬರ ಸ್ವಭಾವವು ಇನ್ನೊಬ್ಬರದಕ್ಕಿಂತ ಬೇರೆಯದೇ ಆದ ನೈತಿಕತೆಯನ್ನು ಬಯಸುತ್ತದೆ. ದೈವೋಪಾಸನೆಯಿಂದ ಮೂಡುವ ನೈತಿಕತೆಯು ಕತ್ತಲ ಕೊಠಡಿಯಲ್ಲಿ ವಿಶಿಷ್ಟ ಸಂನ್ಯಾಸಿಗಳಿಗೆ ಹಾಗೂ ವಿರಾಗಿಗಳ ಸಮೂಹಕ್ಕೆ ಪ್ರಕಟವಾಗುವಷ್ಟು ಸೀಮಿತವಾದುದಲ್ಲ. ಬದಲಾಗಿ ಅವರ ನೈತಿಕತೆಯು ಎಲ್ಲ ಮನುಷ್ಯರ ಬದುಕಿನಲ್ಲಿ ಹಾಗೂ ಅದರ ಪ್ರತಿಯೊಂದು ಹಂತದಲ್ಲಿಯೂ ಇರಬೇಕಾಗುತ್ತದೆ.
ದೈವೋಪಾಸನೆಯು ಯಾವ ಬಗೆಯ ನೈತಿಕತೆಯನ್ನು ಬಯಸುತ್ತದೆ ಹಾಗೂ ಅದು ಮನುಷ್ಯನ ಪ್ರಾಯೋಗಿಕ ಜೀವನದಲ್ಲಿ ಮತ್ತು ವ್ಯಕ್ತಿಗತ ನಡವಳಿಕೆಯಲ್ಲಿ ಪ್ರಕಟವಾಗುವ ಬಗೆ ಹೇಗೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಇಲ್ಲಿ ಪ್ರವಾದಿ (ಸ) ಮುಹಮ್ಮದ್ ಪೈಗಂಬರ್ ಅವರ ಕೆಲವು ವಚನಗಳನ್ನು ನೀಡಲಾಗಿದೆ. ಅವುಗಳಿಂದ ಪೈಗಂಬರ್ (ಸ) ಅವರು ವ್ಯವಸ್ಥೆಗೊಳಿಸಿರುವ ಜೀವನಪದ್ಧತಿಯಲ್ಲಿ ವಿಶ್ವಾಸ, ನೈತಿಕತೆ ಹಾಗೂ ಕರ್ಮಗಳ ಸಂಯೋಜನೆಯು ಯಾವ ಸ್ವರೂಪದ್ದು ಎಂದು ನಾವು ಗ್ರಹಿಸಲು ಸಾಧ್ಯವಾಗುತ್ತದೆ.
ಈಮಾನ್ಗೆ (ಸತ್ಯವಿಶ್ವಾಸ) ಕೆಲವು ಶಾಖೆಗಳಿವೆ. ಮಾನವನು ದೇವರನ್ನು ಮಾತ್ರ ಆರಾಧಿಸಬೇಕು. ನಾಚಿಕೆ, ಸಹನೆ, ವಿಶಾಲ ಮನೋಭಾವಗಳು ಸತ್ಯವಿಶ್ವಾಸದ ಶಾಖೆಗಳಾಗಿವೆ. ಉಡುಪು ಹಾಗೂ ದೈಹಿಕ ಶುಚಿತ್ವಗಳು ಅರ್ಧ ಈಮಾನಿನ (ಸತ್ಯವಿಶ್ವಾಸ) ಭಾಗವಾಗಿದೆ.