ಅಂತರಂಗ; ಮನಸ್ಸಿನ ಅವಾಂತರಗಳು

Antaranga vvani
Published on
ಮನಸ್ಸು ಸ್ವಾಭಾವಿಕವಾಗಿ ಚಂಚಲವಾದದ್ದು. ಅದರ ರೂಪವು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಕ್ರಿಯೆಗಳು ಪ್ರತ್ಯಕ್ಷ. ಉದಾಹರಣೆಗೆ ನನ್ನ ಮನಸ್ಸಿಗೆ ಬಹಳ ಸಂತೋಷವಾಗಿದೆ, ನನಗೆ ಬಹಳ ನೋವಾಗಿದೆ ಎಂದು ಹೇಳುವಲ್ಲಿ ಮನಸ್ಸಿನ ಕ್ರಿಯೆಗಳು ಪ್ರತ್ಯಕ್ಷ. ಮನಸ್ಸು ಸ್ಪರ್ಶಕ್ಕೆ ನಿಲುಕುವುದಿಲ್ಲ.

ನಿರಾಕಾರವಾದ ಮನಸ್ಸು ಶೀತ-ಉಷ್ಣ, ಸುಖ-ದುಃಖ ಮುಂತಾದ ದ್ವಂದ್ವಗಳ ಅನುಭವವನ್ನು ನೀಡುವುದು. ಅದೆಷ್ಟೋ ಮಹಾತ್ಮರು ಈ ಮನಸ್ಸಿಗೆ ಸಂಸ್ಕಾರವನ್ನು ಕೊಟ್ಟು ಸಾಧನೆಯ ಕುಲುಮೆಯಲ್ಲಿ ಪಳಗಿಸಿ ಮನವನ್ನು ಮಹಾದೇವನ ಇರವನ್ನಾಗಿ ಮಾಡಿಕೊಂಡರು. ಅಂಥವರನ್ನೂ ಈ ಮನಸ್ಸು ಅಲುಗಾಡಿಸದೆ ಬಿಟ್ಟಿಲ್ಲ.

ವಯೋವೃದ್ಧ ಸೌಭರಿ ಋಷಿಯು ನದಿಯಲ್ಲಿ ಜಲಸ್ತಂಭನ ಮಾಡಿಕೊಂಡು ತಪೋಮಗ್ನನಾಗಿದ್ದ. ಆಗ ಎರಡು ಮೀನುಗಳು ಆಟವಾಡುತ್ತಿರುವುದನ್ನು ನೋಡಿ ಅವನ ಮನಸ್ಸು ಚಂಚಲವಾಯಿತು. ತಪಸ್ಸಿನಿಂದ ಮೇಲೆದ್ದ ಈ ನೂರಿಪ್ಪತ್ತು ವರ್ಷದ ಋಷಿ ಕನ್ಯಾಶೋಧನೆಗೆ ಹೊರಟ.

ಮಾಂಧಾತನೆಂಬ ರಾಜನಿಗೆ 60 ಹೆಣ್ಣುಮಕ್ಕಳಿದ್ದರು. ಆ ರಾಜನಲ್ಲಿಗೆ ಬಂದ ಋಷಿಯನ್ನು ಕಂಡ ಹೆಣ್ಣುಮಕ್ಕಳೆಲ್ಲ, ತಮಗೆ ಆಶೀರ್ವಾದ ಮಾಡಲು ಬಂದಿದ್ದಾರೆಂದು ತಿಳಿದಿದ್ದರು. ಆದರೆ ತಮ್ಮನ್ನು ಮದುವೆಯಾಗಲು ಬಂದಿದ್ದಾನೆಂದು ತಿಳಿದಾಗ ಅವರೆಲ್ಲ ನಕ್ಕುಬಿಟ್ಟರು. ಬಿದ್ದುಹೋಗುವ ಮರಕ್ಕೇಕೆ ಮತ್ತೆ ಚಿಗುರುವ ಆಶೆ ಎಂದು ನಕ್ಕರು. ಆಗ ಆ ಋಷಿಗಳು ತಮ್ಮ ತಪಃಶಕ್ತಿಯಿಂದ ಯೌವನವನ್ನು ಧರಿಸಿದರು. ಆಗ ಆ ಕನ್ಯೆಯರು ನಾ ಮುಂದೆ ತಾ ಮುಂದೆ ಎಂದು ಅವರನ್ನು ಮದುವೆಯಾದರು.

ಸೌಭರಿ ಋಷಿಗಳ ಕಥೆಯೇ ಹೀಗಾದಾಗ ಸಾಮಾನ್ಯ ಮನುಷ್ಯರ ಪಾಡೇನು? ಸದ್ಗುಣಗಳನ್ನು, ತಪವನ್ನು, ಸಿದ್ಧಿಗಳನ್ನು, ತನುವಿನ ತೇಜ ಆರೋಗ್ಯವನ್ನು ಹಾಳುಮಾಡುವ ಈ ಮನಸ್ಸು ಮುಂದೆ ಪ್ರಾಪ್ತವಾಗುವ ಮೋಕ್ಷಸುಖವನ್ನು ಇಲ್ಲವಾಗಿಸುತ್ತದೆ. ಸಾಧಕನಾದವನು ಅಧ್ಯಾತ್ಮಕ್ಷೇತ್ರಕ್ಕೆ ಬರುವ ಮುನ್ನವೇ ಬಯಕೆಯನ್ನು ಬಿಡಬೇಕು. ಮನವೇ ನಮ್ಮ ಬಂಧನಕ್ಕೂ ಮೋಕ್ಷಕ್ಕೂ ಕಾರಣವಾಗಿದೆ. ಹೀಗಾಗಿ ಮನಸ್ಸನ್ನು ನಿಗ್ರಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net