

ನಮ್ಮ ಶರೀರ ಆರೋಗ್ಯಪೂರ್ಣವಾಗಿದ್ದರೆ ಸಾಧನೆ ಸುಲಭಸಾಧ್ಯ. ನಮ್ಮ ಈ ಶರೀರಕ್ಕೆ ‘ಪುರ’ ಎಂದು ಹೆಸರು. ಪುರ ಎಂದರೆ ಪರಮಾತ್ಮ. ಹಾಗಾಗಿ ‘ಈ ಶರೀರ ಅದು ನಿಮ್ಮದಲ್ಲ, ಪುರನ (ಪರಮಾತ್ಮನ) ಶರೀರ, ಅಂತೆಯೇ ಇದು ಪುರ’ ಎಂದು ತಿಳಿಸುವುದಕ್ಕಾಗಿಯೇ ಈ ಶರೀರವನ್ನು ಪುರ ಎಂದು ಶಾಸ್ತ್ರದಲ್ಲಿ ಕರೆದಿದ್ದಾರೆ. ಈ ಕಾರಣಕ್ಕಾಗಿಯೇ ನಮ್ಮ ಈ ಶರೀರದ ಮೇಲೆ ಶಂಖಚಕ್ರಾದಿಗಳ ಧಾರಣೆ ಮಾಡುವುದು. ಅವು ಪರಮಾತ್ಮನ ಚಿಹ್ನೆಗಳು. ಯಾವ ವಸ್ತು ಯಾರ ಅಧೀನವಾಗಿರುತ್ತದೆ ಆ ವಸ್ತುವಿನ ಮೇಲೆ ಅವರ ಚಿಹ್ನೆ ಹಾಕುವ ನಿಯಮವಿದೆ. ಈ ಶರೀರ ಪರಮಾತ್ಮನ ಅಧೀನವಾದದ್ದರಿಂದ ಭಗವಂತನ ಚಿಹ್ನೆ ಧರಿಸುವ ಪದ್ಧತಿಯಿದೆ.
‘ಈ ಶರೀರ ಒಂದುದಿನ ಪುರುಪುರು ಉರಿದು ಹೋದರೂ ಇದು ಪುರನ (ಪರಮಾತ್ಮನ) ಶರೀರ. ಇದು ಇರುವವರೆಗೂ ಕೆಲಸ ಮಾಡುವುದು, ಸಾಧನೆ ನಡೆಯುವುದು ಆ ಪುರನ ಅನುಗ್ರಹದಿಂದ ಎಂದು ತಿಳಿದು ಈ ಪುರವನ್ನು ಪುರನಿಗೆ (ಪೂರ್ಣನಾದ ಪರಮಾತ್ಮನಿಗೆ) ಸಮರ್ಪಣೆ ಮಾಡಬೇಕೇ ಹೊರತು ಕೇವಲ ಪುರೆ-ಶ್ರೀಖಂಡ ತಿಂದು ಪುರುಪುರು ಉಬ್ಬಿಸಬೇಡ. ಪುರನ ಪುರಕ್ಕೆ (ಮೋಕ್ಷಕ್ಕೆ) ಹೋಗುವ ಆಶೆ ಇದ್ದರೆ ಈ ಪುರವನ್ನು (ಶರೀರವನ್ನು) ಪುರನಿಗೆ (ಪರಮಾತ್ಮನಿಗೆ) ಸಮರ್ಪಣೆ ಮಾಡು’’ ಎಂಬ ಸಂದೇಶವನ್ನು ಕೊಡುವುದಕ್ಕಾಗಿಯೇ ಈ ಶರೀರಕ್ಕೆ ಪುರ ಎಂದು ಹೆಸರಿಟ್ಟಿದೆ ಶಾಸ್ತ್ರ.
ಈ ಸಂದೇಶವನ್ನು ತಮ್ಮ ಹೆಸರಿನಿಂದಲೇ ನೀಡುತ್ತಿದ್ದಾರೆ ಪುರಂದರದಾಸರು. ‘‘ನೀವು ಪುರಂದರರು ಆಗಬೇಕು. ಸಕಾಮಕರ್ಮಗಳು, ಗುರುಹಿರಿಯರ ನಿಂದೆ ಮುಂತಾದ ಪಾಪಕರ್ಮಗಳನ್ನು ಮಾಡುವ ಮೂಲಕ ಈ ಸಂಸಾರದಲ್ಲಿಯೇ ಮತ್ತೆ ಮತ್ತೆ ಹುಟ್ಟುವಂತೆ ಆಗಬೇಡಿ. ಪುರಂದರರಾಗಿ = ಶಾಸ್ತ್ರವಿಹಿತ ಸತ್ಕರ್ಮಗಳನ್ನು ಮಾಡಿ, ಜ್ಞಾನಸಂಪಾದನೆ ಮಾಡಿ ಮತ್ತೆ ಈ ಸಂಸಾರದಲ್ಲಿ ಹುಟ್ಟುವುದನ್ನು ತಪ್ಪಿಸಿಕೊಳ್ಳಿ. ಹೀಗೆ ‘ಪುರಂದರರಾಗಿ ಪರಮಪುರುಷಾರ್ಥ ಪಡೆಯಿರಿ’ ಎಂಬ ದೊಡ್ಡ ಸಂದೇಶವನ್ನು ‘ಪುರಂದರ’ ಎಂಬ ಹೆಸರಿನಿಂದಲೇ ನೀಡುತ್ತಿದ್ದಾರೆ ಪುರಂದರದಾಸರು.