ಅಂತರಂಗ; ಕ್ರಿಸ್ತ ದರ್ಶನಕ್ಕೆ ಗ್ರೀಕರ ಬಯಕೆ

Antaranga vvani
Published on
ವರ್ಷಕ್ಕೊಮ್ಮೆ ಬಹಳ ವಿಜೃಂಭಣೆಯಿಂದ ಜರುಗುವ ಪಾಸ್ಖ (ಈಸ್ಟರ್) ಹಬ್ಬದಲ್ಲಿ ದೇವರನ್ನು ಆರಾಧಿಸಲೆಂದು ಇಸ್ರಾಯೇಲ್ ದೇಶದ ಯೆರೂಸಲೇಮ್ ನಗರಕ್ಕೆ ಆಗಮಿಸಿದ್ದ ಗ್ರೀಸ್ ದೇಶದ ಭಕ್ತರು, ಯೇಸುಕ್ರಿಸ್ತನ ಬಗ್ಗೆ ಕೇಳಿ ಅವರನ್ನು ಮುಖತಃ ಕಾಣಲು ಬಯಸಿದರು.

ಆಗ ಅವರು ಗಲಿಲೇಯದ ಬೆತ್ಸಾಯಿದ ಎಂಬ ಊರಿನವನಾದ ಯೇಸುವಿನ ಶಿಷ್ಯ ಫಿಲಿಪ್ಪನ ಬಳಿ ಬಂದು, ‘ಅಯ್ಯಾ! ನಾವು ಗ್ರೀಸ್ ದೇಶದಿಂದ ಬಂದಿದ್ದು, ನಿಮ್ಮ ಗುರು ಯೇಸುವನ್ನು ನೋಡಲು ಕಾತರಿಸುತ್ತಿದ್ದೇವೆ’ ಎಂದರು. ಈ ಸಂಗತಿಯನ್ನು ಫಿಲಿಪ್ಪ ಮತ್ತೊಬ್ಬ ಶಿಷ್ಯ ಆಂದ್ರೇಯನಿಗೆ ತಿಳಿಸಿದನು. ಆಗ ಅವರಿಬ್ಬರೂ ನೇರವಾಗಿ ಯೇಸುಕ್ರಿಸ್ತನ ಬಳಿಗೇ ತೆರಳಿ, ಈ ವಿಷಯವನ್ನು ತಮ್ಮ ಗುರುವಿಗೆ ತಿಳುಹಿಸಿದರು.

ಅದಕ್ಕೆ ಉತ್ತರವಾಗಿ ಯೇಸು, ಮಾರ್ವಿುಕವಾಗಿ, ‘ನರಪುತ್ರನು ಮಹಿಮೆಯನ್ನು ಹೊಂದುವ ಘಳಿಗೆ ಈಗ ಆಗಮಿಸಿದೆ. ಇಗೋ! ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ. ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ಆದರೆ, ಈಗ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ.

ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ’ ಎಂದರು. ಹೀಗೆ ಯೇಸು ಸ್ವಾಮಿ ತಮ್ಮ ಗೂಢಾರ್ಥದ ಮಾತುಗಳನ್ನು ಮುಂದುವರೆಸುತ್ತ, ‘ಇಗೋ ನನ್ನಾತ್ಮ ತತ್ತರಿಸುತ್ತಿದೆ. ನಾನು ಅದಕ್ಕೆ ಏನೆಂದು ಹೇಳಲಿ? ‘‘ಪಿತನೇ, ಈ ಘಳಿಗೆಯಿಂದ ನನ್ನನ್ನು ಕಾಪಾಡು’’ ಎನ್ನಲೇ? ಇಲ್ಲ. ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಘಳಿಗೆಗೆ ಕಾಲಿಟ್ಟಿದ್ದೇನೆ. ಪಿತನೇ, ನಿಮ್ಮ ನಾಮಮಹಿಮೆಯನ್ನು ಬೆಳಗಿಸಿ’ ಎಂದು ನುಡಿದರು. ಆಗ, ಆಶ್ಚರ್ಯಕರವೆಂಬತೆ, ‘ಹೌದು, ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನಃ ಬೆಳಗಿಸುತ್ತೇನೆ’ ಎಂಬ ಅಶರೀರವಾದ ವಾಣಿ ಮೇಲಿನ ಆಕಾಶದಿಂದ ಜೋರಾಗಿ ಕೇಳಿಬಂತು.

ಆ ಸಮಯದಲ್ಲಿ ಅಲ್ಲಿ ನಿಂತುಕೊಂಡಿದ್ದ ಜನರು ಆ ವಿಸ್ಮಯಕರ ವಾಣಿಯನ್ನು ಕೇಳಿ, ‘ಇದೇನು ಗುಡುಗಿನ ಸದ್ದಿನಂತೆ ಇದೆಯಲ್ಲಾ?’ ಎಂದುಕೊಳ್ಳುತ್ತಿದ್ದರು. ಕೆಲವರು, ‘ದೇವದೂತನೊಬ್ಬ ಯೇಸುವಿನೊಡನೆ ಮಾತನಾಡಿದನು’ ಎಂದಾಗ, ಯೇಸು, ‘ಈ ವಾಣಿಯಾದುದು ನಿಮಗಾಗಿಯೇ ಹೊರತು ನನಗಾಗಿ ಅಲ್ಲ. ಈಗ ಈ ಲೋಕವು ನ್ಯಾಯತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು. ಆದರೆ, ನನ್ನನ್ನು ಭೂಮಿಯಿಂದ ಮೇಲಕ್ಕೇರಿಸಿದಾಗ, ನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ’ ಎಂದು ನುಡಿದರು. ಆ ಮಾತಿನ ಮೂಲಕ ತಮಗೆ ಎಂತಹ ಮರಣ ಕಾದಿದೆಯೆಂದು ಯೇಸು ಸೂಚಿಸಿದರು.

ಅದಕ್ಕೆ ಪ್ರತ್ಯುತ್ತರವಾಗಿ, ನೆರೆದಿದ್ದ ಜನರು, ‘ಅಭಿಷಿಕ್ತನಾದ ಲೋಕೋದ್ಧಾರಕನು ಸದಾಕಾಲ ಇರುವನೆಂದು ಧರ್ಮಶಾಸ್ತ್ರವೇ ತಿಳಿಸುತ್ತದೆ. ಹೀಗಿರುವಲ್ಲಿ, ನರಪುತ್ರನನ್ನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುತ್ತಿಯಲ್ಲ, ಅದು ಹೇಗೆ ಸಾಧ್ಯ? ಆ ನರಪುತ್ರನು ಯಾರು?’ ಎಂದು ಪ್ರಶ್ನೆಗಳನ್ನು ಎಸೆದರು. ಅದಕ್ಕೆ ಯೇಸು, ‘ಇನ್ನು ಸ್ವಲ್ಪವೇ ಕಾಲ ಮಾತ್ರ ಈ ಜ್ಯೋತಿ ನಿಮ್ಮ ನಡುವೆ ಇರುತ್ತದೆ.

ನಿಮ್ಮನ್ನು ಕತ್ತಲು ಕವಿಯದಂತೆ ಜ್ಯೋತಿಯು ಬೆಳಗುತ್ತಿರುವಾಗಲೇ ನೀವು ಮುಂದುಮುಂದಕ್ಕೆ ನಡೆದು ಸಾಗಿ. ಏಕೆಂದರೆ, ಕತ್ತಲಲ್ಲಿ ನಡೆಯುವವರಿಗೆ ಗೊತ್ತುಗುರಿ ಕಾಣುವುದಿಲ್ಲ. ನಿಮ್ಮೊಡನೆ ಜ್ಯೋತಿಯು ಇನ್ನೂ ಇರುವುದರಿಂದ ಆದರ ಮೇಲೆ ದೃಢವಾದ ನಂಬಿಕೆಯಿಡಿ. ಆಗ ನೀವು ಜ್ಯೋತಿಯ ಮಕ್ಕಳೇ ಆಗಿರುತ್ತಿರಿ’ ಎಂದು ಉತ್ತರಿಸಿದರು. ಇದನ್ನು ಕೇಳಿದ ತರುವಾಯ ಅಲ್ಲಿಂದ ಹೊರಟ ಯೇಸು ಜನರ ಕಣ್ಣಿಗೆ ಕಾಣದಂತೆ ಮರೆಯಾದರು. ನೆರೆದಿದ್ದ ಜನರು ಅವರ ಮಾತುಗಳ ಗೂಢಾರ್ಥ ರ್ತಸುತ್ತಲೇ ಅಲ್ಲಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net