

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಬೆಂಗಳೂರಿನಲ್ಲಿ ಸಂಭವಿಸಿದ ಅಂಡರ್‌ಪಾಸ್ ದುರಂತದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ನಗರ ವ್ಯಾಪ್ತಿಯಲ್ಲಿರುವ ರೈಲ್ವೆ ಕೆಳ ಸೇತುವೆಗಳ ಸ್ಥಿತಿಗತಿ ಅವಲೋಕಿಸಿ, ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕ್ರಮ ವಹಿಸಿದೆ.
ಮಹಾಮಳೆಗೆ ಬೆಂಗಳೂರಿನ ಕೆ.ಆರ್.ವೃತ್ತ ಸಮೀಪದ ಅಂಡರ್‌ಪಾಸ್‌ನಲ್ಲಿ ಕಾರೊಂದು ಮುಳುಗಿ ಯುವತಿ ಸಾವಿಗೀಡಾದ ಘಟನೆ ಎಚ್ಚರಿಕೆ ಗಂಟೆಯಾಗಿದ್ದು, ಬೆಂಗಳೂರಿನ ಪ್ರಕರಣ ಮೈಸೂರಲ್ಲೂ ಆತಂಕವನ್ನುಂಟು ಮಾಡಿದೆ. ಮೈಸೂರು ಮಹಾನಗರ ಪಾಲಿಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ಮೈಸೂರಿನ ಜನತೆಯ ಆಗ್ರಹವಾಗಿದೆ. ಈ ನಡುವೆ, ಘಟನೆ ಬಳಿಕ ರಾಜ್ಯ ಸರ್ಕಾರವೂ ಅಂಡರ್‌ಪಾಸ್‌ಗಳ ಸ್ಥಿತಿಗತಿ ಅರಿತುಕೊಂಡು, ಲೋಪದೋಷ ಸರಿಪಡಿಸಿಕೊಳ್ಳಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕ್ರಮ ವಹಿಸಿದೆ.
ನಗರದಲ್ಲಿ ಮಳೆ ನೀರು ನಿಲ್ಲುವ 4 ಅಂಡರ್‌ಪಾಸ್‌ಗಳನ್ನು ಪಾಲಿಕೆ ಗುರುತಿಸಿದೆ. ಅಶೋಕಪುರಂಗೆ ಸಂಪರ್ಕ ಕಲ್ಪಿಸಿರುವ ಉದಯ ರವಿ ರಸ್ತೆ, ಸರಸ್ವತಿಪುರಂ ಅಗ್ನಿಶಾಮಕ ಕಚೇರಿ ಎದುರು, ಬಂಬೂಬಜಾರ್ ಬಳಿ ಮೇದಾರ ಬ್ಲಾಕ್ ಮತ್ತು ಯಾದವಗಿರಿಯ ಜಾವಾ ಫ್ಯಾಕ್ಟರಿ ಬಳಿ ಅಂಡರ್‌ಪಾಸ್‌ಗಳಿವೆ.
ಇಸ್ಕಾನ್ ದೇವಾಲಯದ ಬಳಿಯ ಉದಯರವಿ ರಸ್ತೆ ಮತ್ತು ಸರಸ್ವತಿಪುರಂನ ರೈಲ್ವೆ ಕೆಳಸೇತುವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತುಕೊಳ್ಳುತ್ತದೆ. ಅಧಿಕ ಮಳೆಯಷ್ಟೇ ಅಲ್ಲ, ಸಾಧಾರಣ ಮಳೆ ಬಂದರೆ ಸಾಕು ಇಲ್ಲಿ ನೀರು ಸಂಗ್ರಹವಾಗುತ್ತದೆ. ಹೀಗಾಗಿ ಮಳೆ ಬಂದಾಗ ಜನರು ಅಲ್ಲಿಂದ ಮುಂದೆ ಹೋಗುವುದು ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಹನ ಸವಾರರು ಪರದಾಡಬೇಕಾಗುತ್ತದೆ.
ಕೆಳ ಸೇತುವೆಯಲ್ಲಿರುವ ಚರಂಡಿಗಳು ಚಿಕ್ಕದು. ಜತೆಗೆ, ಅವುಗಳು ಕಸಕಡ್ಡಿ, ಮಣ್ಣಿನಿಂದ ತುಂಬಿಹೋಗಿವೆ. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದಷ್ಟು ಅವುಗಳೆಲ್ಲ ಕಟ್ಟಿಕೊಂಡಿರುತ್ತವೆ. ಸಣ್ಣ ಮಳೆ ಬಂದರೆ ಸಾಕು ನೀರು ನಿಂತುಕೊಳ್ಳುತ್ತದೆ. ಜನರು ಓಡಾಡುವುದು ಕಷ್ಟಕರವಾಗುತ್ತದೆ. ಇದು ಪ್ರತಿ ಮಳೆಗಾಲದಲ್ಲೂ ಉಂಟಾಗುವ ಅವಾಂತರವಾಗಿದೆ. ಪಾಲಿಕೆ ಈ ಸಲ ಮಳೆಗಾಲಕ್ಕಿಂತ ಮುನ್ನವೇ ಎಚ್ಚೆತ್ತುಕೊಂಡಿದೆ.
ಕೆಳಸೇತುವೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮುಂದಾಗಿದ್ದು, ಚರಂಡಿ ಮೇಲೆ ಹಾಕಿರುವ ಸ್ಲಾೃಬ್ ತೆಗೆದು ಕಾರ್ಮಿಕರು ಕಸಕಡ್ಡಿಯನ್ನು ತೆರವುಗೊಳಿಸಿದ್ದಾರೆ. ಚರಂಡಿಯಲ್ಲಿ ತುಂಬಿರುವ ಹೂಳನ್ನು ಹೊರ ತೆಗೆದು ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದ್ದಾರೆ. ರಸ್ತೆ ಬದಿ ಇರುವ ಮಣ್ಣು ತೆಗೆದಿದ್ದಾರೆ.
ಬೆಂಗಳೂರಿನಷ್ಟು ಅಪಾಯಕಾರಿ ಆಗಿರುವ ಅಂಡರ್‌ಪಾಸ್‌ಗಳು ನಗರದಲ್ಲಿಲ್ಲ. ಮಳೆ ಬಂದಾಗ ನೀರು ನಿಂತುಕೊಳ್ಳುತ್ತದೆ. ಬಳಿಕ ಅದು ನಿಧಾನವಾಗಿ ಹರಿದು ಹೋಗುತ್ತದೆ. ಸಾವು-ನೋವು ಆಗುವಂತಹ ಪರಿಸ್ಥಿತಿ ನಗರದಲ್ಲಿ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅಂಡರ್‌ಪಾಸ್‌ನಲ್ಲಿರುವ ಚರಂಡಿಗಳು ಚಿಕ್ಕದಾಗಿದ್ದು, ಸಣ್ಣ ಮಳೆಯನ್ನಷ್ಟೇ ಅವುಗಳು ತಡೆದುಕೊಳ್ಳುತ್ತವೆ. ದೊಡ್ಡ ಮಳೆಯಿಂದ ನೀರಿನ ಹರಿವು ಹೆಚ್ಚಾದಾಗ ಸಹಿಸಿಕೊಳ್ಳುವ ಶಕ್ತಿ ಇವುಗಳಿಗೆ ಇಲ್ಲ. ಹೀಗಾಗಿ, ನೀರು ನಿಂತುಕೊಳ್ಳುತ್ತದೆ ಎಂದು ಅಂಡರ್‌ಪಾಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಹೇಳಿದರು.
ಅಪಾಯಕಾರಿ ಸ್ಥಿತಿಯಲ್ಲಿ ರಾಜಕಾಲುವೆಗಳು:
ಅಂಡರ್‌ಪಾಸ್‌ಗಿಂತ ನಗರದಲ್ಲಿ ರಾಜಕಾಲುವೆಗಳು ಅಪಾಯಕಾರಿ ಸ್ಥಿತಿಯಲ್ಲಿ ಇವೆ. ರಾಜಕಾಲುವೆ ಒತ್ತುವರಿಯಾಗಿರುವುದರಿಂದ ತಗ್ಗು ಪ್ರದೇಶದ ಜನರ ಆತಂಕ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದಲೂ ಮೈಸೂರಿನ ಕೆಲ ಬಡಾವಣೆಗಳು ಮಳೆ ನೀರಿನಿಂದ ಜಲಾವೃತವಾಗುವುದು ಸಾಮಾನ್ಯ ಎನಿಸಿದೆ. ಈ ಸಲವೂ ಮಳೆ ಅವಾಂತರ ಪುನರಾವರ್ತತೆಯಾಗಬಹುದು ಎಂಬ ಆತಂಕ ತಗ್ಗು ಪ್ರದೇಶದ ಜನರಲ್ಲಿ ಕಾಡುತ್ತಿದೆ.
ಕೆಲವು ಬಡಾವಣೆಗಳು ನಗರ ಪಾಲಿಕೆ ವ್ಯಾಪ್ತಿಗೆ, ಮತ್ತೆ ಕೆಲವು ಬಡಾವಣೆಗಳು ಮುಡಾ ವ್ಯಾಪ್ತಿಗೆ ಒಳಪಡುತ್ತವೆ. ತಮ್ಮ ವ್ಯಾಪ್ತಿಗೆ ಒಳಪಡುವ ಮಳೆ ನೀರು ಹರಿದು ಹೋಗುವ ಚರಂಡಿಯನ್ನು ದುರಸ್ತಿ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದಾಗಿದೆ. ಆದರೆ, ಇಚ್ಛಾಶಕ್ತಿ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ.
ಮೈಸೂರಿನ ಹೊರವಲಯ ಬೋಗಾದಿ ಕಡೆಯಿಂದ ಮಳೆ ನೀರು ಹರಿದು ಬರುವ ರಾಜಕಾಲುವೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂಜರಿಯುತ್ತಿರುವುದೇ ತಗ್ಗು ಪ್ರದೇಶಕ್ಕೆ ನೀರು ನುಗ್ಗಲು ಕಾರಣವಾಗುತ್ತಿದೆ.
ಜನತಾನಗರ, ಶಾರದಾದೇವಿನಗರ, ದಟ್ಟಗಳ್ಳಿ, ರಾಮಕೃಷ್ಣನಗರ, ಲಿಂಗಾಂಬುಧಿಪಾಳ್ಯ ಸೇರಿದಂತೆ ಹಲವೆಡೆ ಮಳೆ ನೀರು ತಗ್ಗು ಪ್ರದೇಶಕ್ಕೆ ನುಗ್ಗಿ ಕಳೆದ ವರ್ಷ ಅವಾಂತರ ಸೃಷ್ಟಿಸಿತ್ತು. ಕೆಲ ವರ್ಷಗಳ ಹಿಂದೆ ಶ್ರೀರಾಂಪುರದಲ್ಲಿ ತಗ್ಗು ಪ್ರದೇಶದಲ್ಲಿ ಸಿಲುಕಿದ್ದವರನ್ನು ಬೋಟ್ ಬಳಸಿಕೊಂಡು ರಕ್ಷಿಸಲಾಗಿತ್ತು. ಈ ಬಾರಿ ಮಳೆ ಅವಾಂತರ ಮರುಕಳಿಸದಂತೆ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕಾರ್ಯನಿರ್ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ತಂಡ ವಿವಿಧೆಡೆ ರಾಜಕಾಲುವೆಯನ್ನು ಪರಿಶೀಲನೆ ಮಾಡಿದ್ದು, ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ವಿವಿಧೆಡೆ ರಾಜಕಾಲುವೆ ಪರಿಶೀಲನೆ ನಡೆಸಿದೆ. ಅಲ್ಲದೆ, ಈ ಹಿಂದೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಸ್ಥಳವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ವಲಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕೆಲ ಕಡೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಗರದಲ್ಲಿರುವ ಅಂಡರ್‌ಪಾಸ್‌ಗಳ ಸ್ಥಿತಿಗತಿ ಅವಲೋಕನ ಮಾಡಿದ್ದು, ಮಳೆ ನೀರು ಹರಿದುಹೋಗುವಂತೆ ಅವುಗಳನ್ನು ಸಜ್ಜುಗೊಳಿಸಲಾಗಿದೆ. ಮೈಸೂರಿನಲ್ಲಿ ಅಂತಹ ಸಮಸ್ಯೆ ಇಲ್ಲ.
ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ, ಮೈಸೂರು ನಗರಪಾಲಿಕೆ
ಪಾಲಿಕೆ ವ್ಯಾಪ್ತಿಗೆ ಬರುವ 65 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಳೆ ನೀರು ಹರಿಯುವ ಚರಂಡಿ ಹಾಗೂ ರಾಜಕಾಲುವೆಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು, ಚರಂಡಿಗಳಲ್ಲಿ ಶೇಖರಗೊಂಡಿರುವ ಹೂಳು ತೆರವು ಕಾರ್ಯಾಚರಣೆ ನಡೆದಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಲಾಗಿದೆ.
ಜೆ.ಮಹೇಶ್, ಸೂಪರಿಟೆಂಡ್ ಇಂಜಿನಿಯರ್, ಮೈಸೂರು ಮಹಾನಗರ ಪಾಲಿಕೆ